ಮಂಗಳವಾರ, ಮಾರ್ಚ್ 17, 2009

ಗುಡಿಬಂಡೆಯ ಶಾಲೆ ಮತ್ತು ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಂದ ಪ್ರಶಂಸಾ ಪತ್ರ



ಶನಿವಾರ, ಮಾರ್ಚ್ 14, 2009

ಗುಡಿಬಂಡೆ ಶಾಲೆಗೆ ಗಣಕಯಂತ್ರ ಮತ್ತು ಪುಸ್ತಕಗಳ ಕೊಡುಗೆ

ಗುಡಿಬಂಡೆಯ "ಸರ್ಕಾರಿ ಬಾಲಕಿಯರ ಪ್ರೌಢಶಾಲೆ" ಗೆ ೫೦೦೦ ರೂ ಮೌಲ್ಯದ ಗ್ರಂಥಾಲಯ ಮತ್ತು ೨ ಗಣಕಯಂತ್ರ:

ಗುಡಿಬಂಡೆ ಶಾಲೆ ಭೇಟಿ, ೧೪ನೇ ಮಾರ್ಚಿ ೨೦೦೯


ಶ್ರೀಗಂಧ ಕನ್ನಡ ಬಳಗ ಅಂದು ಅಂಥದೊಂದು ತೀರ್ಮಾನ ಕೈಗೊಳ್ಳದಿದ್ದರೆ, ಮಾರ್ಚ್ ಹದಿನಾಲ್ಕು,೨೦೦೯ , ಅದರ ರೀತಿಯೇ ಬಂದು ಹೋಗುವ ವಾರಾಂತ್ಯದ ಬಹುತೇಕ ಆಲಸಿ ಶನಿವಾರದಂತೆ ನೆನಪಿನ ಅಂಗಳದಲ್ಲಿ ಕಳೆದುಹೋಗುತ್ತಿತ್ತೇನೋ......ಆದರೆ ಅಂದು ಆದದ್ದೇ ಬೇರೆ... ಶ್ರೀಗಂಧ ತನ್ನ ಸುಗಂಧವನ್ನು ಪಸರಿಸಲು ಆ ದಿನದ ಮುಂಜಾವಿನಲ್ಲಿ ಚಿಕ್ಕಬಳ್ಳಾಪುರದ ಹಾದಿಯಲ್ಲಿ ಹೊರಟು ನಿಂತಿತ್ತು...ಬಳಗದ ಒಂದು ಚಿಕ್ಕ ಚೊಕ್ಕದಾದ ಕಾರ್ಯಕ್ಕೆ ಸಾಕ್ಷಿಗಳಾಗಲು ಹೊರಟಿದ್ದ ನಮಗೆ(ನನ್ನೊಡನೆ ಸುಂದರೇಷ್ ಹಾಗೂ ಆನಂದ್) ಗುಡಿಬಂಡೆ ತಲುಪಿದೊಡನೆ ಕಂಡಿದ್ದು ದೃಶ್ಯ ಕಾವ್ಯವೇ ಸರಿ...

ಬಿರು ಬೇಸುಗೆಯಲ್ಲೂ ಮೈ ತುಂಬಿದ ಸುಂದರ ಕೆರೆ..ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಬಂಡೆಗಳ ಸಾಲು.. ನಮ್ಮನ್ನು ಸ್ವಾಗತಿಸಲೋ!! ಎಂಬಂತೆ ಶಿಸ್ತಾಗಿ ಕುಳಿತಿದ್ದ ಅಕ್ಕರೆಯ ಕೊಕ್ಕರೆಗಳ ಸಾಲು.. ಹೀಗೆ ಸಾಗಿದ ನಮಗೆ ಶಾಲೆ ತಲುಪಿದೊಡನೆ ಸಿಕ್ಕ ಸ್ವಾಗತ ನಿಜವಾಗಲೂ ಸ್ಮರಣಾರ್ಹ. ಆತ್ಮೀಯತೆಯಿಂದ ನಮ್ಮನ್ನು ಬರಮಾಡಿಕೊಂಡ ರೀತಿ..ಕಾಳಜಿಯಿಂದ ಉಪಹಾರ ಬಡಿಸಿದ್ದು..ಅವರ ಸಂಭ್ರಮ.. ಅದೊಂದು ಸುಂದರ ಅನುಭವ.......ಬಹುಷಃ ಕನಿಷ್ಠ ಐದಾರು ಮಂದಿಯಾದರೂ ಬರುವರೆಂಬ ನಿರೀಕ್ಷೆಯಲ್ಲಿ ಅವರಿದ್ದರು ಎಂದು ತೋರುತ್ತದೆ..ಸ್ವಲ್ಪ ಹೆಚ್ಚಿಗೆ ತಯಾರಿ ಮಾಡಿಕೊಂಡಿದ್ದರು..ಹೋದದ್ದು ಮೂರೇ ಮಂದಿ..ಇರಲಿ ..... .... ಸ್ವಲ್ಪ ಪೀಠಿಕೆ ಹೆಚ್ಚಾಯ್ತೇನೋ:) ..

ಈಗ ವಿಷಯಕ್ಕೆ ಬರೋಣ.. ಈ ಮೊದಲೇ ತಿಳಿದಂತೆ ಗುಡಿಬಂಡೆಯ ಶಾಲೆಗೆ ಬಳಗದ ವತಿಯಿಂದ ಗ್ರಂಥಾಲಯಕ್ಕಾಗಿ ಪುಸ್ತಕಗಳು ಹಾಗೂ ಗಣಕ ಯಂತ್ರಗಳನ್ನು ನೀಡಲು ನಿರ್ಧರಿಸಿದ್ದೆವು..ಅದರ ಕಾರ್ಯಾರ್ಥವಾಗಿ ನಾವು ಗುಡಿಬಂಡೆಯ ಶಾಲೆಗೆ ಭೇಟಿ ನೀಡಿದ್ದೆವು..

ಬರಿಯ ಪುಸ್ತಕಗಳಿದ್ದರೆ ಸಾಲದು,ಅವುಗಳ ರಕ್ಷಣೆಗೂ ವ್ಯವಸ್ಥೆಯಾಗಬೇಕೆಂದು ಆನಂದ್ ರವರು ಕೊಡುಗೆಯಾಗಿ ನೀಡಿದ ಪುಸ್ತಕ ಕಪಾಟು ಪುಸ್ತಕಗಳ ಆಗಮನವನ್ನು ನಿರೀಕ್ಷಿಸುತ್ತಾ ಶಾಲಾ ಕಛೇರಿಯಲ್ಲಿ ನಿಂತಿತ್ತು ..

ಅದರ ನಿರೀಕ್ಷಣೆಯನ್ನು ತಣಿಸುವ ನಿಟ್ಟಿನಲ್ಲಿ ಪುಸ್ತಕಗಳನ್ನು ಶಾಲಾ ಶಿಕ್ಷಕರ ಸುಪರ್ದಿಗೆ ವಹಿಸಿದೆವು..

ಹಾಗೆ ಎರಡು ಗಣಕ ಯಂತ್ರಗಳನ್ನು ಶಾಲೆಗೆ ನೀಡಲಾಗಿದೆ ...ಅವುಗಳನ್ನು ಈ ಚಿತ್ರದಲ್ಲಿ ಕಾಣಬಹುದು. ಆ ಶಾಲೆಯ ಕೊರತೆಯಾಗಿದ್ದ ಗಣಕ ಯಂತ್ರಗಳು ಇನ್ನು ಮುಂದೆ ಆ ಶಾಲೆಯ ಮಕ್ಕಳ ಪ್ರಗತಿಗೆ ಸಹಾಯಕವಾಗಲೆಂದು ಆಶಿಸೋಣ. ಹಾಗೆಯೇ ಆ ಶಾಲೆಯಲ್ಲಿ ಗಣಕ ಯಂತ್ರದ ತರಬೇತಿ ನೀಡುವ ಶಿಕ್ಷಕರಿರುವುದನ್ನು ಖಚಿತಪಡಿಸಿಕೊಂಡಿದ್ದೇವೆ.

ಇನ್ನು ಶಾಲೆಯ ವಿಷಯಕ್ಕೆ ಬಂದರೆ ನಿಜಕ್ಕೂ ಹೆಮ್ಮೆ ಪಡುವ ವಿಚಾರಗಳಿವೆ....

ಈ ಶಾಲೆಯಲ್ಲಿ ಸುಮಾರು ೫೦೦ ಮಂದಿ ಬಾಲಕಿಯರು ಶಿಕ್ಷಣ ಪಡೆಯುತ್ತಿದ್ದಾರೆ..ಹತ್ತನೇ ತರಗತಿಯಲ್ಲೇ ೯೦ ಮಂದಿ ವ್ಯಾಸಂಗ ಮಾಡುತ್ತಿದ್ದಾರೆ..ನಗರದವರಿಗೆ ಇದು ದೊಡ್ಡ ವಿಷಯ ಎನಿಸದಿದ್ದರೂ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಷ್ಟು ಪ್ರಾಮುಖ್ಯತೆ ಇಲ್ಲದ ಹಳ್ಳಿಯ ವಾತಾವರಣದಲ್ಲಿ ಬಹು ದೊಡ್ಡ ಸಾಧನೆಯಾಗೆ ತೋರುತ್ತದೆ..ಹಾಗೆಯೇ ಅಷ್ಟೂ ಮಂದಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾದುತ್ತಿರುವುದು ಎಲ್ಲಿದೆ ಕನ್ನಡ ಎನ್ನುವವರಿಗೂ ಉತ್ತರ... ಬರಿಯ ಸಂಖ್ಯಾ ಬಾಹುಳ್ಯದಲ್ಲಷ್ಟೇ ಅಲ್ಲ..ಸಾಧನೆಯಲ್ಲೂ ಈ ಹುಡುಗಿಯರು ಮುಂದಿದ್ದಾರೆ....

ಆ ಶಾಲೆಯ ಶಿಕ್ಷಕಿಯೋರ್ವರ ಮಾತಿನಲ್ಲೇ ಹೇಳುವುದಾದರೆ...ಅಂತರ ಶಾಲಾ ಸ್ಪರ್ಧೆಗಳಲ್ಲಿ ೨೦ ಪ್ರತಿಶತ ಬಹುಮಾನಗಳು,ರಾಜ್ಯ ಮಟ್ಟದ ನಾಟಕ ಪ್ರದರ್ಶನ ನೀಡಿದ ಆ ಪ್ರದೇಶದ ಏಕೈಕ ಬಾಲಕಿಯರ ತಂಡ,ಬಹಳ ರಚನಾತ್ಮಕವಾಗಿ ಎಲ್ಲ ಕೆಲಸಗಳಲ್ಲು ಭಾಗವಹಿಸುವ ಬಾಲಕಿಯರು..

ಎಲ್ಲಕ್ಕೂ ಕಳಸವಿಟ್ಟಂತೆ ಇರುವುದು ಈ ಶಾಲೆಯ ಶಿಕ್ಷಕ ವೃಂದ.. ನಿಜವಾಗಲೂ ಅವರು ಶಾಲೆಯನ್ನು ಅಭಿವೃದ್ಧಿಪಡಿಸಲು ಟೊಂಕ ಕಟ್ಟಿ ನಿಂತಿರುವರೆಂದೇ ಎನಿಸುತ್ತದೆ.. ನಿಜ ಒಂದೇ ದಿನದಲ್ಲಿ ಯಾವ ನಿರ್ಧಾರಕ್ಕೂ ಬರಲಾಗುವುದಿಲ್ಲ..ಆದರೆ ನಿಜವಾಗಿಯೂ ಅಲ್ಲಿ ಅಭಿವೃದ್ಧಿಯ ಒಂದು ಸೆಲೆಯಂತೂ ಇದೆ...

ಕೊನೆಯದಾಗಿ.. .........

ಇದು ಸಣ್ಣ ಕೆಲಸವೇ ಆಗಿರಬಹುದು.ಆದರೆ ಇದೊಂದು ಸಾರ್ಥಕ ಕಾರ್ಯ. ಸಾಫ್ಟ್ ವೇರ್ ಇಂಜಿನಿಯರ್ ಗಳೆಂದರೆ ಬರಿಯ ಸ್ವಾರ್ಥಿಗಳು,ದುಂದು ವೆಚ್ಚಿಗಳು ಎನ್ನುವ ಅಭಿಪ್ರಾಯ ಹೋಗಲಾಡಿಸಲು ಇಂಥ ಕಾರ್ಯಗಳು ನೆರವಾಗಬಹುದು:)

ಮುಂದೆ ನಮ್ಮ ಬಳಗದಿಂದ ಆಗಬೇಕಾಗಿರುವ ಎಷ್ಟೋ ಮಹಾಕಾರ್ಯಗಳಿಗೆ ಇದೊಂದು ಮುನ್ನುಡಿಯಷ್ಟೆ..ಇಂದು ಕಿಡಿ , ಮುಂದೆ ಜ್ವಾಲೆಯಾಗಬಹುದು... ಇದರ ಶ್ರೇಯಸ್ಸು ಬಳಗದ ಪ್ರತಿಯೊಬ್ಬ ಸದಸ್ಯರಿಗೂ ಸೇರಿದ್ದು...

ಈ ಕಾರ್ಯದಲ್ಲಿ ನೆರವಾದ ಎಲ್ಲರಿಗೂ ಅಭಿನಂದನೆಗಳು..ಗುಡಿಬಂಡೆಗೆ ಹೋಗಿಬರಲು ಸಹಾಯ ಮಾಡಿದ ಸುಂದರೇಶ್ ಹಾಗೂ ಆನಂದ್ ರವರಿಗೆ ವಿಶೇಷ ಕೃತಙ್ಞತೆಗಳು. ಆನಂದ್ ರವರು ಪುಸ್ತಕ ಕಪಾಟನ್ನು ಕೊಡುಗೆಯಾಗಿ ನೀಡಿ ಇತರರಿಗೆ ಮಾದರಿಯಾಗಿದ್ದಾರೆ..

ವಿವೇಕಾನಂದರ ಈ ವಾಣಿ ನಮ್ಮೆಲ್ಲರ ಬದುಕಿಗೆ ಬೆಳಕಾಗಲಿ...

ಈ ಜಗತ್ತು ಬರಿಯ ಆಟ.ನೀವೆಲ್ಲಾ ಭಗವಂತನ ಈ ಆಟದ ಸಂಗಾತಿಗಳು. ಯಾವ ಶೋಕವೂ ಇಲ್ಲದೆ,ಯಾವ ಸಂಕಟವೂ ಇಲ್ಲದೆ ಕೆಲಸ ಮಾಡುತ್ತಾ ಹೋಗಿ..ನೀವು ಯಾರಿಗಾದರೂ ಸಹಾಯ ಮಾಡುವಿರೆಂಬುದು ಬೂಟಾಟಿಕೆ..ಮೊದಲು ಸಹಾಯ ಮಾಡುವ ಭಾವನೆಯನ್ನು ಕಿತ್ತೊಗಿಯಿರಿ...ನಂತರ ಪೂಜಿಸುತ್ತಾ ಹೋಗಿ.ನೀವೆಲ್ಲಾ ಆ ಭಗವಂತನ ಸೇವಕರು..ಜೀವಂತ ಭಗವಂತನ ಸೇವೆ ಮಾಡಿ!

- ರೇಣುಕ ಶ್ರೀಹರ್ಷ

ಭಾನುವಾರ, ಮಾರ್ಚ್ 1, 2009

ಕನ್ನಡ ದಿನಪತ್ರಿಕೆಗಳು



ಬಳಗದಿಂದ ೮ ದಿನ ಪತ್ರಿಕೆಗಳನ್ನು ತರಿಸುತ್ತಿದ್ದೇವೆ
ನೆಲ ಮಹಡಿ (ಸ್ವಾಗತಕಾರಿಣಿ) - ವಿಜಯ ಕರ್ನಾಟಕ, ಪ್ರಜಾ ವಾಣಿ
೧ ನೇ ಮಹಡಿ - ಕನ್ನಡ ಪ್ರಭ
೨ ನೇ ಮಹಡಿ - ವಿಜಯ ಕರ್ನಾಟಕ
೩ ನೇ ಮಹಡಿ - ಉದಯವಾಣಿ
೪ ನೇ ಮಹಡಿ - ಸಂಯುಕ್ತ ಕರ್ನಾಟಕ
೫ ನೇ ಮಹಡಿ - ಉದಯವಾಣಿ
೬ ನೇ ಮಹಡಿ - ಪ್ರಜಾ ವಾಣಿ
೭ ನೇ ಮಹಡಿ - ವಿಜಯ ಕರ್ನಾಟಕ (ಇದು ಬಿ.ಯು. ವತಿಯಿಂದ ಮೊದಲಿಂದಲೂ ಬರುತ್ತಿದೆ)