ಬಳಗದ ಮತ್ತೊಂದು ಸಾರ್ಥಕ ದಿನ. ಅದರ ಅನುಭವವನ್ನು ಇಲ್ಲಿ ವ್ಯಕ್ತ ಪಡಿಸೋದು ದುಸ್ಸಾಹದ ಕೆಲಸ.
ಈ ಬಾರಿ ಕುಟುಂಬದ ಜೊತೆಗೆ ಹೋಗಿದ್ದು ಮತ್ತಷ್ಟು ಭಾಗಿತ್ವವನ್ನು ಕೊಡಲು ಸಹಾಯ ಮಾಡಿತು. ಬೆಳಿಗ್ಗೆ ಸುಮಾರು ೭ ಗಂಟೆಗೆ ಹೊರಟ ನಾವು, ೯ ಗಂಟೆಗೆಲ್ಲಾ ಕಾಮತ್ ನಲ್ಲಿ ತಿಂಡಿ ಮುಗಿಸಿ ಮೊದಲು ಬೀಚಗಾನಹಳ್ಳಿಗೆ ಹೋದೆವು. ಅಲ್ಲಿನ ವಾತಾವರಣ, ಮಕ್ಕಳ ಶಿಸ್ತು ನಮ್ಮನ್ನ ಯಾವುದೋ ಲೋಕದಲ್ಲಿ ತೇಲಾಡಿಸಿತು.
ಅಲ್ಲಿನ ಕಾರ್ಯಕ್ರಮ ಮುಗಿದಮೇಲೆ. ೧೫ ಕಿ.ಮೀ ಪ್ರಯಾಣ ಮಾಡಿ ಗುಡಿಬಂಡೆಗೆ ಬಂದೆವು. ಪ್ರತಿಭಾನ್ವಿತ ಮಕ್ಕಳಿಗೆ ಬಹುಮಾನಗಳನ್ನು ಕೊಟ್ಟು, ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ತಯಾರಾಗಲು ಹುರಿದುಂಬಿಸಿ, ಆರ್ಥಿಕವಾಗಿ ನಿಶಕ್ತರಾದ ಪ್ರತಿಭೆಗಳಿಗೆ ನಮ್ಮ ನೆರವಿನ ಭರವಸೆ ಕೊಟ್ಟೆವು.
ಅಲ್ಲಿಂದ ಆವಲ ಬೆಟ್ಟಕ್ಕೆ ಹೊರಟೆವು. ಬೆಟ್ಟದ ತುದಿ ತಲುಪುವಷ್ಟರಲ್ಲಿ ಹೊಟ್ಟೆ ತಾಂಡವವಾಡುತ್ತಿತ್ತು. ಅಲ್ಲಿಳಿದ ತಕ್ಷಣ ಅಲ್ಲಿನ ವಾತಾವರಣ, ಸುಂಯ್ಯ್ ಎಂದು ಬೀಸುವ ಗಾಳಿಗೆ ಮನಸ್ಸು ಆಹಾ, ಎಂಥಾ ಸುದಿನವಿದು ಅನ್ನಿಸಿತು. ಪುಷ್ಕಳ ಊಟ ಮಾಡಿ, ಮಕ್ಕಳ ಹಾಡು, ನಾಟಕ ಆಸ್ವಾದಿಸಿ, ಅವರು ಮಾಡುವ ತರ್ಲೆಗಳಿಗೆ ಆಗಾಗ ಗುರಾಯಿಸಿ, ಬೆಟ್ಟದಲ್ಲಿ ಓಡಾಡಿ, ಅಲ್ಲೇ ಇರುವ ದೇವಸ್ಥಾನಕ್ಕೆ ಭೇಟಿ ನೀಡಿ, ಹೊರಡುವಾಗ ಸಂಜೆ ೫ ಗಂಟೆ.
ದೇಹ ತಣಿದಿತ್ತು, ಮನಸ್ಸು ಪ್ರಫುಲ್ಲಿಸಿತ್ತು. ಬರದವರ ಬಗ್ಗೆ ಮರುಕ ಹುಟ್ಟಿತ್ತು.
ಮುಂದಿನ ಬಾರಿ ನೀವು ಬನ್ನಿ. ಬರ್ತೀರಲ್ವಾ?