ಮಂಗಳವಾರ, ಸೆಪ್ಟೆಂಬರ್ 14, 2010

ನಮ್ಮ ಸಂಸ್ಥೆ ಅಲ್ಕಟೆಲ್-ಲ್ಯೂಸೆಂಟ್ ನಲ್ಲಿ "ಕನ್ನಡ ಕಲಿ" ಕಾರ್ಯಕ್ರಮ

ಭಾನುವಾರ, ಆಗಸ್ಟ್ 15, 2010

ರಾಮಮೂರ್ತಿ ನಗರ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ರಾಮಮೂರ್ತಿ ನಗರ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿವಿಧ ಆಟೋಟಗಳ ಸ್ಪರ್ಧೆಯನ್ನು ಆಯೋಜಿಸಿದ್ದರು. ಇದರಲ್ಲಿ ವಿಜೇತರಾದ ಸುಮಾರು ೯೨ ಮಕ್ಕಳಿಗೆ ಬಳಗದ ಪರವಾಗಿ " ಪ್ರಶಂಸಾ ಪತ್ರ"ಗಳನ್ನು ವಿತರಿಸಲಾಯಿತು. ಆ ದಿನದ ವಿವಿಧ ಕಾರ್ಯಕ್ರಮಗಳಲ್ಲಿ ಬಳಗದ ವಿನಯ್ ಕುಮಾರ್, ಅಂಜನ್, ಗುರುರಾಜರಾವ್ (ಅಂಜನ್ ಅವರ ತಂದೆ) ಮತ್ತು ಮಾಜಿ ನಗರಸಭೆ ಸದಸ್ಯರಾದ ಪ್ಯಾರೆಜಾನ್ ಅವರು ಭಾಗವಹಿಸಿದ್ದರು.

ಶಾಲೆಯಲ್ಲಿ ಹೊಸ ಕಟ್ಟಡದ ಕಾಮಗಾರಿ ನಡೆಯುತ್ತಿರುವುದರಿಂದ ಅವ್ಯವಸ್ಥೆಯ ಮಧ್ಯದಲ್ಲೇ ವ್ಯವಸ್ಥಿತವಾಗಿ, ಅತಿ ಉತ್ಸಾಹದಿಂದ ಮಕ್ಕಳು, ಉಪಾಧ್ಯಾಯರು ಪಾಲ್ಗೊಂಡಿದ್ದ ರೀತಿ ಅಚ್ಚರಿ ಮೂಡಿಸುತ್ತಿತ್ತು. ಬಣ್ಣ ಬಣ್ಣದ ವೇಷಗಳಲ್ಲಿ ಮಕ್ಕಳು ನಡೆಸಿಕೊಟ್ಟ ಮನೋರಂಜನಾ ಕಾರ್ಯಕ್ರಮಗಳು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಒಂದು ಮರೆಯಲಾಗದ ದಿನ..



ಬಳಗದಿಂದ ವಿತರಿಸಲಾದ ಪ್ರಶಂಸಾ ಪತ್ರ





ಶನಿವಾರ, ಜೂನ್ 12, 2010

ಗುಡಿಬಂಡೆ ಶಾಲೆಗೆ ಕಲಿಕಾ ಸಾಮಗ್ರಿಗಳ ವಿತರಣೆ

(ಲೇಖನ: ವೀಣಾ ಪ್ರಭಾಕರ್)
ಜೂನ್ ೧೨ ರಂದು ಬೆಳಿಗ್ಗೆ ಅಂದುಕೊಂಡಂತೆಯೇ ನಮ್ಮ ಬಳಗದಿಂದ ಸುಮಾರು ೨೦ ಮಂದಿ ಗುಡಿಬಂಡೆ ಹೆಣ್ಣುಮಕ್ಕಳ ಶಾಲೆಗೆ ಹೋಗಿದ್ದೆವು. ಅಲ್ಲಿನ ಆ ಮಕ್ಕಳ ಹಾಗೂ ಅಧ್ಯಾಪಕ ವರ್ಗದವರ ಸಂಭ್ರಮ, ಉತ್ಸಾಹಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪ್ರತಿಯೊಂದು ಸಿದ್ದತೆಯಲ್ಲಿಯೂ ಶಿಸ್ತು, ಅಚ್ಚುಕಟ್ಟುತನ, ಶ್ರದ್ಧೆ, ಪ್ರಾಮಾಣಿಕತೆ ಎದ್ದು ಕಾಣುತ್ತಿತ್ತು.

ದೂರದಿಂದ ಬಂದಿರುತ್ತೇವೆಂದು ನಮಗಾಗಿಯೇ ತಯಾರಿಸಲ್ಪಟ್ಟ ವಿಧವಿಧವಾದ, ರುಚಿಯಾದ ತಿಂಡಿಗಳನ್ನು ಅಚ್ಚುಕಟ್ಟಾಗಿ ಬಡಿಸುತ್ತಾ ಮೆಲುದನಿ, ಮುಗುಳ್ನಗೆಯಿಂದ ಮತ್ತೆ ಮತ್ತೆ ವಿಚಾರಿಸಿಕೊಳ್ಳುತ್ತ ಆ ಮಕ್ಕಳು ನಮ್ಮ ಬಂಧುವರ್ಗದವರೇ ಏನೋ ಅನಿಸುವಷ್ಟು ಹೃದಯಕ್ಕೆ ಹತ್ತಿರವಾಗಿಬಿಟ್ಟರು. ಮತ್ತೆ ಕೆಲವು ಮಕ್ಕಳು ಸುಮಾರು ಆರು ಕಾರುಗಳಲ್ಲಿ ತುಂಬಿಕೊಂಡು ಹೋಗಿದ್ದ ಪುಸ್ತಕ ಮತ್ತಿತರೇ ವಸ್ತುಗಳನ್ನು ೧೦ ನಿಮಿಷಗಳ ಒಳಗಾಗಿ ಯಾವುದೇ ಅಬ್ಬರ, ಗೊಂದಲಗಳಿಲ್ಲದೆ ಮೊದಲನೇ ಮಹಡಿಗೆ ಸಾಗಿಸಿದ್ದರು.

ಮೊದಲನೇ ಮಹಡಿಯಲ್ಲಿದ್ದ (ಇತ್ತೀಚೆಗೆ ನಿರ್ಮಿತವಾಗಿರುವ) ಸಭಾಂಗಣದಲ್ಲಿ ಶಾಲೆಯ ಅಷ್ಟೂ ಮಕ್ಕಳೂ ಸ್ವಲ್ಪವೂ ಗಲಾಟೆ ಇಲ್ಲದೆ, ಸಾಲಾಗಿ, ನೂಕಾಡದೆ ಬಂದು ಸೇರಿದರು. ಸ್ವಲ್ಪ ಹೆಚ್ಚೇ ಅನಿಸುವಷ್ಟು ಭಾಷಣಗಳ ಸರಮಾಲೆಗಯನ್ನು ಹೊಂದಿದ್ದ ಸುಮಾರು ಎರಡೂವರೆ ಘಂಟೆಗಳ ಕಾಲ ನಡೆದ ಕಾರ್ಯಕ್ರಮವನ್ನು ಬಹಳ ಸಂಯಮ ಮತ್ತು ಶಿಸ್ತಿನಿಂದ ವೀಕ್ಷಿಸಿದರು.

ಹೂಗುಚ್ಛಗಳಿಗಾಗಿಯೇ ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡುವ ಈ ದಿನಗಳಲ್ಲಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಒಂದೊಂದು ಗುಲಾಬಿ ಹೂವನ್ನು ಕೊಟ್ಟು ಆತ್ಮೀಯವಾಗಿ ಸ್ವಾಗತಿಸಿದ್ದು ಎಲ್ಲರಿಗೂ ಮಾದರಿಯಾಗಿತ್ತು.

ಆಯಾ ಕಾರ್ಯಕ್ರಮಕ್ಕೆ  ಯಾರ್ಯಾರು ನಿಯೋಜಿಸಲ್ಪಟ್ಟಿದ್ದರೋ ಆ ಮಕ್ಕಳು ಸ್ವಲ್ಪವೂ ತಡಮಾಡದೆ ಬಂದು ಅವರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಹೋಗುತ್ತಿದ್ದರು. ಲೀಲಾಜಾಲವಾಗಿ, ಸುಮಧುರವಾಗಿ, ಒಂದೇ ಕಂಠದಲ್ಲಿ ನಾಡಗೀತೆಯನ್ನು ಹಾಡಿದ ಮಕ್ಕಳಿಂದ ಹಿಡಿದು, ಒಂದೇ ರೀತಿಯಾಗಿ ಚಪ್ಪಾಳೆ ತಟ್ಟುವುದರವರೆಗೂ ಆ ಮಕ್ಕಳು ತಾವೆಲ್ಲರೂ ಒಂದೇ, ಸಾಧನೆಯ ಕಡೆಗೆ ಎಲ್ಲರೂ ಒಟ್ಟಾಗಿಯೇ ಹೆಜ್ಜೆಗಳನ್ನಿಡುತ್ತಿದ್ದೇವೆ ಎಂದು ಪರೋಕ್ಷವಾಗಿ ಹೇಳುವಂತಿತ್ತು.

ಆ ದಿನ ಆ ಮಕ್ಕಳಿಗೆ ಹಂಚಲ್ಪಟ್ಟ ಸಾಮಾನುಗಳು:

೧) ೧೩ ಮಕ್ಕಳಿಗೆ - ಬ್ಯಾಗ್, ಜಾಮಿಟ್ರಿ ಪೆಟ್ಟಿಗೆ, ಲೇಖನಿ, ಪೆನ್ಸಿಲ್, ರಬ್ಬರ್, ೧ ವರ್ಷಕ್ಕಾಗುವಷ್ಟು ಬರೆಯುವ ಪುಸ್ತಕಗಳು, ಬಿಳಿ ಸಮವಸ್ತ್ರ, ಶೂ ಮತ್ತು ಕಾಲು ಚೀಲ (ಸಾಕ್ಸ್).
೨) ೧೨ ಮಕ್ಕಳಿಗೆ - ಜಾಮಿಟ್ರಿ ಪೆಟ್ಟಿಗೆ, ಲೇಖನಿ, ಪೆನ್ಸಿಲ್, ರಬ್ಬರ್, ೧ ವರ್ಷಕ್ಕಾಗುವಷ್ಟು ಬರೆಯುವ ಪುಸ್ತಕಗಳು
೩) ಶಾಲೆಯ ಎಲ್ಲಾ ಮಕ್ಕಳಿಗೂ ಕನ್ನಡ-ಕನ್ನಡ, ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟುಗಳು, ಒಂದು ನೋಟ್ ಪುಸ್ತಕ, ಲೇಖನಿ, ಪೆನ್ಸಿಲ್ ಹಾಗು ರಬ್ಬರ್.
೪) ಎಂಟು, ಒಂಭತ್ತು ಹಾಗು ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಮಕ್ಕಳಿಗೆ ಕೈಗಡಿಯಾರ ಮತ್ತು ಅಭಿನಂದನಾ ಪತ್ರ.
೫) ೧೦ ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಈಗ ಕಾಲೇಜು ಸೇರಿಸುವ ಇಬ್ಬರು ವಿದ್ಯಾರ್ಥಿನಿಯರಿಗೆ - ನೋಟ್ ಪುಸ್ತಕಗಳು, ಪಠ್ಯ ಪುಸ್ತಕಗಳು ಮತ್ತು ಹೊಸ ಬಟ್ಟೆಗಳು
೬) ಇದರ ಜೊತೆಗೆ ತಾವೆಲ್ಲರೂ ಕೊಟ್ಟ ಉಪಯೋಗಿಸಿದ ಬಟ್ಟೆಗಳನ್ನು ಅಧ್ಯಾಪಕರ ಸುಪರ್ದಿಗೆ ಕೊಟ್ಟು, ನಂತರ ಅವರಲ್ಲೇ ವಿತರಣೆ ಮಾಡಿಕೊಳ್ಳಲೂ ಕೇಳಿಕೊಂಡೆವು

ಅವರವರಿಗೆ ದೊರೆತ ವಸ್ತುಗಳನ್ನು ತೆಗೆದುಕೊಳ್ಳುತ್ತಾ ಹೊರಟ ಆ ಮಕ್ಕಳ ಕಣ್ಣುಗಳಲ್ಲಿನ ಮಿಂಚು ಮತ್ತು ಆ ಆನಂದದ ಮುಂದೆ ನೂರಾರು ಕೋಟಿ ರೂಪಾಯಿಗಳೂ ಕೂಡ ಗೌಣ ಅನ್ನಿಸುತ್ತಿತ್ತು. ಎಲ್ಲರ ಪರವಾಗಿ ಒಬ್ಬ ವಿದ್ಯಾರ್ಥಿನಿ ಎದ್ದುನಿಂತು, ತಮಗೆ ಸಿಕ್ಕಂಥಹ ಸಾಮಗ್ರಿಗಳನ್ನು ಪೂರ್ಣವಾಗಿ ಉಪಯೋಗಿಸಿಕೊಂಡು ಚೆನ್ನಾಗಿ ಓದಿ, ಮುಂದೊಂದು ದಿನ ಇದೇ ರೀತಿ ಬೇರೆಯ ಮಕ್ಕಳಿಗೆ ಸಹಾಯಕರಾಗಿ ನಿಲ್ಲುತ್ತೇವೆಂದು ಹೇಳಿದಾಗ ಆ ಧನಿಯಲ್ಲಿದ್ದ ಭರವಸೆ ಮತ್ತು ನೈಜತೆಗೆ ಕಣ್ಣು ತುಂಬಿಬಂತು.

ಟೀಂ ವರ್ಕ್ ಮತ್ತು ಟೀಂ ಬಿಲ್ಡಿಂಗ್ ಗಳಲ್ಲಿ ಯಾವ ಕಾರ್ಪೋರೇಟ್ ಗುರುಗಳಿಗೂ ಸವಾಲು ಹಾಕುವಹಾಗಿರುವ ಈ ಮಕ್ಕಳನ್ನು ನೋಡಿ ಮನಸ್ಸು ನಿಬ್ಬೆರಗಾಯಿತು.  ಒಟ್ಟಿನಲ್ಲಿ ಈ ಮೂಲಕ ನಾವೆಲ್ಲರೂ ಕೂಡಿಸಿ ಕೊಟ್ಟಂತಹ ಪುಸ್ತಕಗಳು ಮತ್ತಿತರ ವಸ್ತುಗಳು ಸಾರ್ಥಕವಾಗಿದೆ ಎಂದು ತಿಳಿದು ಸಂತೋಷವಾಯಿತು.  ನಿಸ್ವಾರ್ಥ ಮನಸ್ಸಿನಿಂದ ಈ ಮಕ್ಕಳಿಗೆ ಎಲ್ಲಾ ವಸ್ತುಗಳೂ ದೊರಕುವಂತೆ ಮಾಡಿರುವ ವೆಂಕಟೇಶ್ ಮೂರ್ತಿ ಮತ್ತಿತರ ಶಿಕ್ಷಕರನ್ನು ಇಲ್ಲಿ ನೆನೆಯಲೇ ಬೇಕು.  ಇವರ ನೇತೃತ್ವದಲ್ಲಿ ಈ ವಸ್ತುಗಳು ಮಕ್ಕಳಿಂದ ಪೂರ್ಣವಾಗಿ ಉಪಯೋಗಿಸಲ್ಪಡುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.














ಮತ್ತೊಂದು ಲೇಖನ
(ಲೇಖನ: ರವಿ ಪೂಜಾರಿ)
ಗುಡಿಬಂಡೆ ಗುಡಿಯ ವಿಚಾರ

"ರೀ ಅಂಜನ್, ಸುಂದ್ರೇಶ್, ಆನಂದ್, ಪ್ರಶಾಂತ್, ಪ್ರಕಾಶ್... ಈ ಪುಸ್ತಕದ್ ಕ್ವಾಲಿಟಿ ಚೆನ್ನಾಗಿಲ್ಲ ರೀ, ಬೇರೆ ಯಾವ್ದಾದ್ರು ನೋಡೋಣ"... "ಬೇರೆ ಯಾವ್ದೋ ಯಾಕೆ, ವಿಧ್ಯಾ ಲೇಖಕ್ ಪುಸ್ತಕನೇ ಕೊಡೋಣವಂತೆ, ನಂಗೆ ಎಮ್.ಎಸ್.ಐ.ಎಲ್ ನಲ್ಲಿ ಇರೋ ಡೈರೆಕ್ಟ್ರೆ ಗೊತ್ತು, ನಮ್ಮ ಬಳಗಕ್ಕೆ ಅಂದ್ರೆ ತುಂಬ ಕಡಿಮೆ ಬೆಲೆಯಲ್ಲೆ ಕೊಡ್ತಾರೆ, ಪುಸ್ತಕ ಪ್ರಿಂಟ್ ಮಾಡೋ ಕಾರ್ಖಾನೆಗೆ ಕರೆದುಕೊಂಡು ಹೋಗ್ತೀನಿ ಬನ್ನಿ ಮರಾಯರೆ, ಚಿಂತೆ ಯಾಕೆ."

ಹೀಗೆ ಶುರುವಾಯ್ತು ನಮ್ಮ ಗುಡಿಬಂಡೆ ಶಾಲೆಯ ಮಕ್ಕಳಿಗೆ ಕಲಿಕೆ ಸಾಮಗ್ರಿ ನೀಡುವ ಪೂರ್ವ ತಯಾರಿ. ಕಾರ್ಯಕಾರಿ ಸಮಿತಿಯ ಒಬ್ಬೊಬ್ಬರು ಅತಿ ಉತ್ಸಾಹದಿಂದ ಈ ಕಾರ್ಯದ ಪೂರ್ವ ತಯಾರಿಯಲ್ಲಿ ತೊಡಗಿದ ಪರಿ ಹೇಗಿತ್ತೆಂದರೆ, ನಾವೆಲ್ಲ ಯಾವ್ದೋ ಮದುವೆ ಸಮಾರಂಭಕ್ಕೆ ತಯಾರಿ ನಡೆಸಿದ ಹಾಗಿತ್ತು, ಅಷ್ಟು ಅಚ್ಚುಕಟ್ಟು, ಶ್ರದ್ಧೆ ಮತ್ತು ಉತ್ಸಾಹ ಭರಿತ ಮನೋಭಾವ. ನಾವು ಅಂದುಕೊಂಡಂತೆ ಎಲ್ಲಾ ಕೆಲಸವು ಸರಾಗವಾಗಿ ಮುಗಿಯಿತು ಮತ್ತು ಗುಡಿಬಂಡೆಗೆ ತೆರಳುವ ದಿನ ಬಂದೇ ಬಿಡ್ತು.

ಅಂದು ಶನಿವಾರ, ನಾವೆಲ್ಲ ಅತಿ ಉತ್ಸಾಹದಿಂದ ಗುಡಿಬಂಡೆ ಕಡೆಗೆ ಪ್ರಯಾಣ ಬೆಳೆಸಿದೆವು. ದಾರಿ ಮದ್ಯದಲ್ಲಿ ಸಿಕ್ತು "ಕಾಮತ್" ಹೋಟೆಲ್. ಬೆಳಿಗ್ಗೆ ಬೇಗನೆ ಎದ್ದಿದ್ರಿಂದ ಹೊಟ್ಟೆ ಚುರು ಚುರು ಅಂತಿತ್ತು, ಅದು ಹೋಟೆಲ್ ನೋಡಿದ್ ಮ್ಯಾಲ್ ಅಂತು ಇನ್ನು ಹೆಚ್ಚಾಯ್ತು. ತಿಂಡಿ ತಿಂದು, ಕಾಫಿ ಹೀರ್ ಕೊಂಡು ಮತ್ತೆ ನಮ್ಮ ಪಯಣ ಮುಂದುವರಿಸಿದೆವು. ನಮ್ಮೆಲ್ಲರ ಕಾರ್ ಗಳು ಒಂದರ ಹಿಂದೆ ಒಂದು ಸಾಲಾಗಿ ಆ ಊರಿನಲ್ಲಿ ಶಾಲೆ ಕಡೆಗೆ ಹೋಗ್ತಾ ಇದ್ರೆ, ಜನರು "ಇದೇನ್ ಲಾ ಈಟೋಂದ್ ಕಾರ್ ಗಳು ಇಸ್ಕೂಲ್ ಕಡೆ ಹೋಯ್ತವೆ" ಅನ್ನೋ ತರ ನೋಡ್ತಾ ಇದ್ದಂಗ್ ಇತ್ತು.

ನಾವೆಲ್ಲರು ಶಾಲೆಯ ಆವರಣದ ಒಳಗೆ ಬರುತ್ತಿದ್ದಂತೆ ನಮ್ಮನ್ನ ಮೊದಲು ಸ್ವಾಗತಿಸಿದ್ದು ವರುಣರಾಯ, ಜಿನು ಜಿನುಗುವ ಮಳೆರಾಯ. ಮದುವೆ ಮಂಟಪಕ್ಕೆ ಗಂಡಿನ ಕಡೆಯವರನ್ನ ಬರಮಾಡಿಕೊಂಡಂತಿತ್ತು ಅವರು ನಮ್ಮನ್ನು ಬರಮಾಡಿಕೊಡುವಲ್ಲಿ ತೋರಿದ ಗೌರವ. ನಾವೆಲ್ಲರೂ ಅಲ್ಲಿಗೆ ಹೋಗಿ ಮಕ್ಕಳನ್ನ ನೋಡೋದೇ ನಮ್ಮ ಹೆಬ್ಬಯಕೆ ಒಂದೆಡೆಯಾದ್ರೆ, ನಮಗಾಗಿ ಅಷ್ಟು ದೂರದಿಂದ ನಮ್ಮನ್ನು ನೋಡಲು ಬಂದವರನ್ನ ಪ್ರೀತಿಯಿಂದ ನೋಡ್ಕೊಬೇಕು ಅನ್ನೋದು ಶಾಲೆಯವರ ಬಯಕೆ. ನಾವೆಲ್ಲ "ಕಾಮತ್" ಹೋಟೆಲ್ ನಲ್ಲಿ ಸ್ವಲ್ಪ ತಿಂಡಿ ತಿಂದಿದ್ವಿ ಆದ್ರೂ, ಅವರು ಪ್ರೀತಿಯಿಂದ ಎಲ್ರೂ ತಿಂಡಿ ತಿನ್ನಿ ಬನ್ನಿ ಅಂದಾಗ ಸ್ವಲ್ಪ ಜಾಸ್ತಿನೇ ಹಸಿವಾಯ್ತು. "ಪ್ರೀತಿಗೆ ದಾಹ ತೀರದ ಮೋಹ" ಅಂತ ಹಿರಿಯರು ಯಾರೋ ಹೇಳಿದ್ದು ನೆನಪಾಯ್ತು..
ಕಾರುಗಳಲ್ಲಿ ನಾವು ತೆಗೆದು ಕೊಂಡು ಹೋಗಿದ್ದ ಕಲಿಕಾ ಸಾಮಗ್ರಿಗಳನ್ನು ಶಾಲೆಯ ಮಕ್ಕಳೇ ಹತ್ತು ನಿಮಿಷದಲ್ಲಿ ಸಂಗ್ರಹಣ ಕೊಠಡಿಯೊಳಗೆ ಸಾಗಿಸುವುದಲ್ಲದೇ, ನಾವು ಪ್ರಿಂಟ್ ಮಾಡಿಸಿದ್ದ ಹೆಸರು ಬರೆವ ಸ್ಟಿಕ್ಕರ್ ನ್ನ ಬರೀ ಹತ್ತೇ ನಿಮಿಷದಲ್ಲಿ ಅಂಟಿಸಿದರು. ಆ ಮಕ್ಕಳು ಒಬ್ಬರನ್ನೊಬ್ಬರನ್ನು ನೋಡಿ ಕಣ್ಣು ಸನ್ನೆಯಲ್ಲೇ ಯಾವ್ಯಾವ ಕೆಲಸ ಯಾರ್ ಯಾರು ಮಾಡ್ಬೇಕು ಅಂತ ನಿಗದಿ ಪಡಿಸಿ, ಹತ್ತೇ ಹತ್ತು ನಿಮಿಷದಲ್ಲಿ ಕೆಲಸ ಮುಗಿಸಿ ಬಿಟ್ರು. ಇದನ್ನೇ ನಾವು ಆಫೀಸ್ನಲ್ಲಿ ಟೀಮ್ ವರ್ಕ್ ಅಂದ್ಕೊಂಡು ಹತ್ತು ಜನ ಒಂದು ವಾರ ಎಳಿತೀವಿ. ಹಿ.. ಹಿ.. ಹಿ..ಹಿ..

ಶಾಲೆಯ ಒಂದು ಸಭಾಂಗಣದಲ್ಲಿ ಈ ಸಮಾರಂಭಕ್ಕೆ ಸೇರಿದೆವು. ಸುಮಾರು ನಾಲ್ಕು ನೂರಕ್ಕು ಹೆಚ್ಚು ಮಕ್ಕಳು ಸೇರಿದ್ದ ಈ ಸಭಾಂಗಣದಲ್ಲಿ ಮಕ್ಕಳು ಸ್ವಲ್ಪವೂ ಗಲಾಟೆ ಮಾಡದೆ, ಶಿಸ್ತಿನಿಂದ ಕುಳಿತು ಅತಿ ಉತ್ಸಾಹದಿಂದ ನಡೆಯುವ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು. ಸಭೆಗೆಂದು ಅಂದು ಗುಡಿಬಂಡೆಯ ಗಣ್ಯಾತಿ ಗಣ್ಯರು, ಶಿಕ್ಷಣಾದಿಕಾರಿಗಳು, ಹಿರಿಯ ಪಂಡಿತರು, ಶಾಲೆಯ ಮುಖ್ಯೋಪಾದ್ಯಾಯರು, ಶಾಲೆಯಲ್ಲಿ ಈ ಮುಂಚೆ ಸೇವೆ ಸಲ್ಲಿಸಿದವರು ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಅಸಲಿಗೆ ನಾವು ಈ ಮಟ್ಟದಲ್ಲಿ ಸಭೆಯನ್ನು ನಿರೀಕ್ಷಿಸಿಯೇ ಇರಲಿಲ್ಲ, ಎಲ್ಲವೂ ನಮಗೆ ಕನಸಿನಂತೆ ಕಾಣುತ್ತಿತ್ತು. ಉಪಸ್ಥಿರಿದ್ದ ಒಬ್ಬೊಬ್ಬರು ಮಹನೀಯರು, ಪಂಡಿತರು, ಜೀವನದಲ್ಲಿ ಸಾಕಷ್ಟು ಸಾದನೆಗೈದವರು, ಅವರನ್ನೆಲ್ಲಾ ಒಂದೇ ಸೂರಿನಡಿ ನೋಡುವುದು ನಮಗೆ ಒದಗಿ ಬಂದ ಭಾಗ್ಯವೆಂದುಕೊಂಡೆವು.

ಮಧುರಾತಿ ಮಧುರವಾದ ನಾಡಗೀತೆಯೊಂದಿಗೆ ಶಾಲೆಯ ಕಾರ್ಯಕ್ರಮಗಳು ಶುರುವಾದವು. ಮಕ್ಕಳು ಮಧುರ ಕಂಠದಿಂದ ಹಾಡ್ತಿದ್ರೆ, ನಮಗೆಲ್ಲ ನಮ್ಮ ಶಾಲೆಯ ದಿನಗಳು ನೆನಪಾದವು, ನಾವೆಲ್ಲ ನಮ್ಮ ನಮ್ಮ ಮುಖ ನೋಡ್ಕೊಂಡು ನಿಮ್ಗು ಹಿಂಗೆ ಅನ್ಸ್ತಾ ಅಂತ ಕಣ್ಣಲ್ಲೇ ಕೇಳಿ ಕೊಂಡೆವು. ಕಾರ್ಯಕ್ರಮದ ವಿವರಣೆ ನೀಡುವಲ್ಲಿ ಶಾಲೆಯ ಮುಖ್ಯ ರುವಾರಿ ವೆಂಕಟೇಶ್ ಮೂರ್ತಿಯವರು ಮುಂದಾದರು. ದೀಪ ಬೆಳಗುವ ಸಮಯಕ್ಕೆ ಸರಿಯಾಗಿ ಬಂದ ಗುಡಿಬಂಡೆಯ ಬಿ.ಇ.ಒ ಅವರನ್ನು ಸ್ವಾಗತಿಸಿ, ಮಹನೀಯರು, ಬಳಗದ ಸದಸ್ಯರು, ಹಿರಿಯರು ಸೇರಿ ಜ್ಯೋತಿ ಬೆಳಗಿದರು.

ವೆಂಕಟೇಶ್ ಮೂರ್ತಿಯವರ ಮೊದಲ ಮಾತು ಶ್ರೀಗಂಧ ಕನ್ನಡ ಬಳಗದ ಕಾರ್ಯವನ್ನು ತುಂಬು ಹೃದಯದಿಂದ ಹೊಗಳುವುದು. ಅವರ ಈ ಹೊಗಳಿಕೆಯ ಮಾತುಗಳಲ್ಲಿ ನೈಜತೆ ಇತ್ತು, ಮಾನವೀಯತೆಯ ಲೇಪನವಿತ್ತು, ಸಾಮಾಜಿಕ ಸಂಘಟನೆಯ ಛಾಪಿತ್ತು, ಪ್ರೀತಿಯ ಧನ್ಯಾವಾದಗಳಿದ್ದವು. ಅವರ ಸ್ಪಷ್ಟ ಉಚ್ಚಾರಣೆ, ಭಾಷೆಯಲ್ಲಿನ ಹಿಡಿತ ಮತ್ತು ಅವರ ಮುಗ್ದ ಮನಸ್ಸಿನ ಮಾತುಗಳು ನಮ್ಮ ಕಂಗಳನ್ನು ಕೊಂಚ ತೇವ ಮಾಡಿದವು. ಚಿಕ್ಕದಾಗಿ, ಚೊಕ್ಕವಾಗಿ ಮಾತನಾಡಿ ಮುಂದೆ ನಡೆಯುವ ಕಾರ್ಯಕ್ರಮಗಳ ಬಗ್ಗೆ ಸಣ್ಣ ವಿವರಣೆ ನೀಡಿದರು. ಮೊದಲಿಗೆ ಉತ್ತಮ ಅಂಕ ಗಳಿಸಿದ 8, 9, 10ನೇ ತರಗತಿಯಿಂದ ಮೂರು ಮಕ್ಕಳಿಗೆ ಕೈ ಗಡಿಯಾರ ನೀಡುವುದೆಂದು ಹೇಳುತ್ತಿದ್ದಂತೆ ಮಕ್ಕಳ ಕಣ್ಣುಗಳಲ್ಲಿ ಆಸೆ ಮತ್ತು ಆಸಕ್ತಿ ಎರಡೂ ಮೂಡಿದವು. ಕೈಗಡಿಯಾರ ಪಡೆದ ಮೂವರು ಮಕ್ಕಳು ಕುಣಿಯುತ್ತ ತಮ್ಮ ತಮ್ಮ ಸಹ ಪಾಟಿಗಳಿಗೆ ತೋರಿಸುತ್ತಿದ್ದಂತೆ ನಮ್ಮ ಬಳಗದವರು ಈ ಮಾತನ್ನು ಹೇಳಿದರು. "ನಾವು ಇನ್ನೂ ನಾಲ್ಕು ನೂರು ಕೈಗಡಿಯಾರವನ್ನ ನಿಮಗೆ ಕೊಡಬೇಕೆಂದಿದ್ದೇವೆ, ಆದರೆ ನೀವೆಲ್ಲರೂ ಉತ್ತಮ ಅಂಕ ಗಳಿಸುವುದೊಂದೆ ಷರತ್ತು" ಎಂದರು. ಎಲ್ಲಾ ಮಕ್ಕಳು ಖುಶಿಯಿಂದ ಚಪ್ಪಾಳೆ ಹೊಡೆಯುವ ಮೂಲಕ, ನಾವು ಸಾದಿಸಿಯೇ ಸಿದ್ದ ಎಂಬ ಆಶ್ವಾಸನೆ ನೀಡಿದರು.

ನಂತರ ಶಾಲೆಯವರು ಗುರುತಿಸಿದ್ದ ಹದಿಮೂರು ಮಕ್ಕಳಿಗೆ Uniforms, shoes, bags, notebooks, geometry boxes  ನೀಡಿದೆವು. ಅದಾದ ನಂತರ ಹನ್ನೆರೆಡು ಮಕ್ಕಳಿಗೆ ಪೂರ್ಣ ಪ್ರಮಾಣದ ಕಲಿಕೆ ಸಾಮಗ್ರಿಗಳನ್ನು ನೀಡಿದೆವು. ಅದಾದ ನಂತರ ಎಲ್ಲಾ ಮಕ್ಕಳಿಗೂ ಆಂಗ್ಲ ಮತ್ತು ಕನ್ನಡದ ಶಭ್ದಕೋಶ, ಪೆನ್ನು, ಪೆನ್ಸಿಲ್ಲು, ರಬ್ಬರ್ರು, ಕಥೆ ಪುಸ್ತಕ ಎಲ್ಲವನ್ನ ಒಂದೊಂದಾಗಿ ನೀಡಿದೆವು. ಆ ಮಕ್ಕಳ ಮುಖದಲ್ಲಿ ಮೂಡಿದ ನಗು, ಉತ್ಸಾಹವನ್ನು ಕಂಡು ಅವರೊಂದಿಗೆ ನಾವೂ ಸೇರಿ ನಲಿದೆವು, ಆ ಕ್ಷಣಗಳು ನಮ್ಮನ್ನು ಈಗಲೂ ರೋಮಾಂಚನಗೊಳಿಸುತ್ತವೆ. ಕಾರ್ಯಕ್ರಮ ಶುರುವಾಗುವ ಮುನ್ನ, ಶುರುವಾದ ನಂತರ ಮತ್ತು ಕಾರ್ಯಕ್ರಮದ್ದುದ್ದಕ್ಕೂ ಆ ಮಕ್ಕಳಲ್ಲಿದ್ದ ಶಿಸ್ತು, ಶ್ರದ್ಧೆ ಮಕ್ಕಳಲ್ಲಿದ್ದ ನಮ್ಮ ಅಭಿಮಾನ ಇಮ್ಮಡಿಗೊಳಿಸಿತು. ಶಾಲೆಯ ಮುಖ್ಯಸ್ಥರು ಗುರುತಿಸಿದ ಕೆಲವು ಮಕ್ಕಳಿಗೆ ಬಹುಮಾನ ನೀಡುವಾಗ ಮತ್ತು ಮಹನೀಯರು ಅವರನ್ನು ಕುರಿತು ಮಾತನಾಡಿದ ನಂತರ, ಎಲ್ಲರೂ ಸಮಾನರು ಎಂದು ತಿಳಿಸಲು ಎಲ್ಲರಿಗೂ ಒಂದೇ ರೀತಿಯ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುತ್ತಿದ್ದರು. ಟಪ್ ಟಪ್ ಟಪ್...., ಟಪ್ ಟಪ್ ಟಪ್...., ಟಪ್... ಟಪ್... ಟಪ್... ಶಾಲೆಯ ಸಮವಸ್ತ್ರದಂತೆ ಕೇಳಿ ಬಂದ ಆ ಚಪ್ಪಾಳೆಯ ಶಬ್ಧ ತರಂಗಗಳು ನಮಗೆ ಸಂಗೀತದ ಅಲೆಯಂತೆ ಬಂದು ಕರ್ಣಾನಂದ ನೀಡುವಂತಿದ್ದವು.

ಪುಸ್ತಕ ಮತ್ತು ಮತ್ತಿತರ ಕಲಿಕಾ ಸಾಮಗ್ರಿಗಳ ವಿನಿಯೋಗವಾದ ನಂತರ ಶಾಲೆಯ ಮುಖ್ಯಸ್ಥರು ಮಕ್ಕಳನ್ನು ಕುರಿತು ನಾಲ್ಕು ಮಾತನಾಡಬೇಕಾಗಿ ನಮ್ಮ ಬಳಗದವರಲ್ಲಿ ವಿನಂತಿಸಿದರು. ಮೊದ್ಲೇ ನಮ್ಗು ಭಾಷಣಕ್ಕು ಒಗ್ಗದ ಮಾತು, ಅದರಲ್ಲಿ ನಾವು ಭಾಷಣಕ್ಕಾಗಿ ಪೂರ್ವ ತಯಾರಿಯನ್ನೂ ಮಾಡ್ಕೊಂಡಿರಲಿಲ್ಲ. ಆದ್ರೆ ಮನಸ್ಸು ತುಂಬಿ ಬಂದಾಗ ಯಾವ ಪೂರ್ವ ತಯಾರಿನೂ ಬೇಕಿಲ್ಲ  ಅನ್ನೋದು ನಮ್ಮ ಬಳಗದವರ ಹಿತಿನುಡಿಯಿಂದ ತಿಳಿಯಿತು. ನೀತಿ ಕಥೆಯಿಂದ ತಮ್ಮ ಮಾತನ್ನು ಶುರು ಮಾಡಿ, ಮಕ್ಕಳ ಗಮನ ಸೆಳೆದು  "ಸತ್ಯಮೇವಜಯತೇ" ಎಂಬ ಸತ್ಯವನ್ನು ಮಕ್ಕಳಿಗೆ ತಿಳಿಸುವಲ್ಲಿ ಶ್ರೀಯುತ ಅಶ್ವತ್ ಅವರು ಯಶಸ್ವಿಯಾದರು. ನಾಲ್ಕೇ ನಾಲ್ಕು ಮಾತನಾಡಿ ಉಳಿದದ್ದನ್ನು "ಗುಟ್ಟೊಂದ ಹೇಳುವೆನು ಪುಟಾಣಿ ಮಕ್ಕಳೇ" ಎಂಬ ಹಾಡಿನ ಮೂಲಕ ಮಕ್ಕಳಿಗೆ ಹಿತನುಡಿ ಹೇಳಿದವರು ನಮ್ಮ ಮಧುರ ಕಂಠದ ಪ್ರಕಾಶ್ ಅವರು. ಕೊಟ್ಟೋನು ಕೋಡಂಗಿ, ಈಸ್ಕೋಂಡೋನು ಈರ್ ಭದ್ರ ಆದಂಗ್ ಆಗ್ ಬಾರದು, ನಿಮಗೆ ನೀಡಿರುವ ಎಲ್ಲಾ ಕಲಿಕೆ ಸಾಮಗ್ರಿಗಳನ್ನ ನೀವು ಸದ್ಭಳಕೆ ಮಾಡಿಕೊಂಡಲ್ಲಿ ನಮ್ಮ ಶ್ರಮ ಸಾರ್ಥಕ ಅಂತ ಎರಡೇ ಸಾಲಿನಲ್ಲಿ ತಮ್ಮ ಮಕ್ಕಳಿಗೆ ಮುನ್ನೆಚ್ಚರಿಕೆ ನೀಡಿ ಹಿತನುಡಿ ಹೇಳಿದವರು ನಮ್ಮ ಮೃದು ಹೃದಯದ ಆನಂದ್ ಅವರು. ಹೆಣ್ಣಿಗೆ ಮತ್ತೊಂದು ಹೆಣ್ಣೇ ಕಿವಿ ಮಾತನ್ನ ಸವಿಯಾಗಿ ಹೇಳಿದ್ರೆ ಹೆಚ್ಚು ಕಾಲ ಉಳಿಯುತ್ತೆ ಎಂದು ಹೆಳುತ್ತ ನಮ್ಮ ವೀಣಾ ಪ್ರಭಾಕರ್ ಅವರಲ್ಲಿ ವಿನಂತಿಸುತ್ತಿದ್ದಂತೆ ದಿಗ್ಭ್ರಾಂತರಾದ ಅವರು ತಡವರಿಸುತಲೇ ತಮ್ಮ ಮಾತನ್ನು ಶುರುಮಾಡಿದರು. ಹಳ್ಳಿಯಲ್ಲಾಗ್ಲಿ ದಿಲ್ಲಿಯಲ್ಲಾಗ್ಲಿ, ಸಮಾಜದಲ್ಲಿ ಮತ್ತು ನಮ್ಮ ಭಾರತದ ಜೀವನ ಶೈಲಿಯಲ್ಲಿ ಹೆಣ್ಣು ಮಕ್ಕಳ ಪಾತ್ರ ಅತಿ ಮುಖ್ಯವಾಗಿರುತ್ತದೆ. ಹೆಣ್ಣೊಂದು ಕಲಿತರೆ ಮನೆಯೊಂದು ಕಲಿತಂತೆ, ಹಾಗಾಗಿ ನನ್ನ ಪುಟ್ಟ ತಂಗಿಯರೇ ನೀವು ಕಲಿಯಬೇಕು, ಕಲಿತು ನಿಮ್ಮ ಮನೆಯನ್ನ ಬೆಳಗುವ ಬೆಳಕಾಗ ಬೇಕು ಎಂದು ಮಕ್ಕಳಲ್ಲಿ ಸ್ಪೂರ್ಥಿ ತುಂಬಿ ಆತ್ಮ ಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾದರು. ಭಾಷಣ ಕೇಳ ಕೇಳುತ್ತಲೇ ನಮ್ಮ ಆಶು ಕವಿತೆ ಎಕ್ಸ್ ಪರ್ಟ್  ವಿನಯ್  ಪಟ ಪಟಾ ಅಂತ ಕವಿತೆ ಹೇಳೆ ಬಿಟ್ರು, ಚಿಕ್ಕದಾಗಿ ಚೊಕ್ಕವಾಗಿ ಹೇಳಿ ಮಕ್ಕಳಿಗೆ ಕವಿತೆಗಳಲ್ಲಿ ಆಸಕ್ತಿ ಮೂಡುವಂತೆ ಮಾಡಿದರು. ಉಳಿದ ಬಳಗದ ಸದಸ್ಯರಾದ ಅಂಜನ್, ಪ್ರಶಾಂತ್, ಸುಂದ್ರೇಶ್, ಸೌಮ್ಯ, ಪ್ರತಿಭ, ರಾಜ್ ಶೇಕರ್, ಭಾಷಣ ಇಷ್ಟೇ ಸಾಕು, ಮುಂದಿನ ಕಾರ್ಯಕ್ರಮ ನೋಡೊನ ಅಂತ ಹೇಳಿದರು. ಇಷ್ಟೆಲ್ಲಾ ಹಿತನುಡಿ ಕೇಳಿದ ಮಕ್ಕಳು ನಗು ನಗುತ್ತ ಮನೆಗೆ ತೆರಳಲಿ ಎಂಬ ಉದ್ದೇಶದಿಂದ ರವಿ ಪೂಜಾರಿ ಕೆಲವೊಂದು ಜೋಕ್ಸ್ ಹೇಳಿ, ಅವರ ಫೇವರೇಟ್ ಆದ ಕುಡುಕನ ಶೈಲಿಯಲ್ಲಿ ಕೆಲವೊಂದು ಪದಗೊಳ್ನ ಹೇಳಿ ಮಕ್ಕಳನ್ನ ಮತ್ತು ನೆರೆದ ಸಭೆಯನ್ನ ನಗಿಸುವಲ್ಲಿ ಯಶಸ್ವಿಯಾದರು.

ಸಭಾಂಗಣದಲ್ಲಿ ಸಭೆಯನ್ನು ಅಲಂಕರಿಸಿದ ಒಬ್ಬೊಬ್ಬ ಮಹನೀಯರು ನಮ್ಮ ಬಳಗದ ಬಗ್ಗೆ ಮತ್ತು ಈ ಕಾರ್ಯಕ್ರಮದ ಬಗ್ಗೆ ಹೊಗಳುತ್ತಿದ್ದಂತೆ ನಾವು ಏನನ್ನೋ ಸಾದಿಸಿದ ಹೆಮ್ಮೆ ಎಂಬಂತೆ ಮನಸ್ಸು ಬೀಗುತ್ತಿತ್ತು, ಸಾರ್ಥಕತೆಯ ಬದುಕಿನ ಹಾದಿಯಲ್ಲಿ ಪಯಣಿಸಲು ಶುರು ಮಾಡಿದೀವಿ ಅಂತ ಅನ್ಸ್ತಿತ್ತು. "ಮನುಷ್ಯರಾಗಿ ಹುಟ್ಟಿದ ನಾವೆಲ್ಲ ಅದೆಷ್ಟೇ ಕಷ್ಟ ಆದ್ರು ನಮ್ಮನ್ನ ನಾವು ಸಮಾಜ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಬೇಕು, ಉತ್ತಮ ಕಾರ್ಯಗಳನ್ನ ರೂಡಿಸಿ ಸಾಮಾಜಿಕ ಪಿಡುಗುಗಳನ್ನ ನಾಶ ಮಾಡ್ಬೇಕು; ಅದನ್ನೇ ಈ ಶ್ರೀಗಂಧ ಕನ್ನಡ ಬಳಗದವರು ತಮ್ಮ ಕೆಲಸದ ಮೂಲಕ ಸಮಾಜಕ್ಕೆ ತಿಳಿಸಿದ್ದಾರೆ" ಎಂದು ಕನ್ನಡ ಮತ್ತು ಸಂಸ್ಕೃತ ಪಂಡಿತರು ಹೇಳಿದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ಕೂಡಲೇ ನಮಗೆ ನೆನಪಾದದ್ದು ಈ ಕಾರ್ಯದ ಹಿಂದಿರುವ ನಮ್ಮ ಬಳಗದ ಎಲ್ಲಾ ಸದಸ್ಯರ ಶ್ರಮ ಮತ್ತು ಸಹಾಯ ಮನೋಭಾವ. ಅಯ್ಯೋ...ಎಂದು ಬರುವವರಿಗೆ ಮಿಡಿಯುವ ನಮ್ಮ ಶ್ರೀಗಂಧ ಕನ್ನಡ ಬಳಗದ ಮನಗಳ ನಡುವೆ ವಾಸಿಸುವುದೇ ನನ್ನ ಭಾಗ್ಯ. 

ಬುಧವಾರ, ಜೂನ್ 9, 2010

ರಾಮಮೂರ್ತಿ ನಗರದ ಶಾಲೆಯಿಂದ ಧನ್ಯವಾದ ಪತ್ರ

ಶನಿವಾರ, ಜೂನ್ 5, 2010

ರಾಮಮೂರ್ತಿ ನಗರದ ಶಾಲೆಗೆ ನೋಟ್ ಪುಸ್ತಕ ವಿತರಣೆ

ಸಾರ್ಥಕತೆಯ ಹೊಸ ಭಾಷ್ಯದಂತಿತ್ತು ಅಂದಿನ ದಿನ. ಪುಸ್ತಕಗಳು ಹೇರಿದ್ದ ಕಾರನ್ನು ಶಾಲೆಯ ಆವರಣದೊಳಗೆ ತಂದು ನಿಲ್ಲಿಸಿದಾಗ, ಧೋ ಎಂದು ಮುತ್ತಿತ್ತು ಹುಡುಗರ ದಂಡು. "ಸರ್, ಪುಸ್ತಕಗಳನ್ನು ಕೊಡ್ತೀರಂತೆ, ಎಷ್ಟು ಕೊಡ್ತೀರ" ಅಂತೊಬ್ಬ, "ಸರ್, ನನ್ಗೂ ಒಂದು ಕೊಡಿ" ಅಂತ ಮತ್ತೊಬ್ಬ ಕಿರುಚ್ತಿದ್ದಾಗ ಉಪಾಧ್ಯಾಯರು ಜೋರಾಗಿ "ಏಯ್, ಎಲ್ರಿಗೂ ಕೊಡ್ತಾರೆ ಹೋಗ್ರಿ ಈಗ" ಅಂತ ಗದರಿದರು.

ಅಷ್ಟರಲ್ಲಿ ಬಳಗದ ಎನ್. ಚಂದ್ರಶೇಖರ ಮತ್ತು ಕುಟುಂಬಸಮೇತರಾಗಿ ಸುಶೀಲಾ ಗೌಡ ಬಂದರು. ಇಸ್ಕಾನ್ ನಿಂದ ಬಿಸಿಯೂಟಕ್ಕೆ ಹುಡುಗರೆಲ್ಲಾ ಸಾಲಾಗಿ ನಿಂತಿದ್ದರು. ಬಿಸಿಬೇಳೆ ಭಾತ್ ಮತ್ತು ಕಡ್ಲೆ ಬೇಳೆ ಪಾಯಸದ ಘಮ್ ಎಲ್ಲಕಡೆ ಆವರಿಸಿತ್ತು.

ಮಕ್ಕಳ ಊಟವೆಲ್ಲಾ ಮುಗಿಯುತ್ತಿದ್ದಂತೆ ಎಲ್ಲರನ್ನೂ ಸರತಿಯಲ್ಲಿ ನಿಲ್ಲಿಸಲಾಯ್ತು. ೧,೨ ಮತ್ತು ೩ ನೇ ತರಗತಿಯ ("ನಲಿಕಲಿ" ಅಂತಾರೆ) ಮಕ್ಕಳಿಗೆ ನೋಟ್ ಪುಸ್ತಕ, ಪೆನ್ಸಿಲ್ ಮತ್ತು ಎರೇಸರ್ ಹಂಚಲಾಯ್ತು. ಆದ್ರೆ ೪,೫,೬ ಮತ್ತು ೭ ನೇ ತರಗತಿಯ ತಲಾ ೧೦ ಮಕ್ಕಳಿಗೆ ಮಾತ್ರ ಪುಸ್ತಕ ಕೊಡುವ ಯೋಜನೆ ಇತ್ತು. ಆದರೆ ಉತ್ಸಾಹದ ಬುಗ್ಗೆಗಳಿದ್ದ ಹಾಗಿದ್ದ ಮಕ್ಕಳಿಗೆ ನಿರಾಸೆ ಮಾಡಲು ಮನ್ನಸ್ಸಾಗಲಿಲ್ಲ. ಹಾಗಾಗಿ ಪುಸ್ತಕಗಳನ್ನು ಮುಂದೊಮ್ಮೆ ಉಪಾಧ್ಯಾರಿಗೇ ಕೊಡಲು ಹೇಳಿ ಎಲ್ಲರಿಗೂ ಪೆನ್ಸಿಲ್ ಮತ್ತು ಎರೇಸರ್ ನ್ನು ಕೊಟ್ಟೆವು. ಆ ಮಕ್ಕಳ ಉತ್ಸಾಹ, ಅವರ ಸಂತೋಷ ಖಂಡಿತಾ ಪದಗಳಲ್ಲಿ ಮೂಡಿಸಲು ಆಗ್ತಿಲ್ಲ. ಅದನ್ನು ಸವಿದರೇ ಸೊಗಸು.

ಉಪಾಧ್ಯಾಯರೆಲ್ಲರೂ ಬಳಗಕ್ಕೇ ಧನ್ಯವಾದಗಳನ್ನು ಅರ್ಪಿಸಿದರು. ಶೈಕ್ಷಣಿಕ ವರ್ಷ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಪುಸ್ತಕಗಳನ್ನು ಕೊಟ್ಟದ್ದು ಬಹಳ ಉಪಯುಕ್ತವಾಯ್ತು ಅಂತ ಬಹಳ ಸಲ ನೆನೆದರು.

ಕಾರಿನಲ್ಲಿದ್ದ ಬಳಗದ ಲೇಬಲ್ ಗಳನ್ನು ನೋಡಿದ ಕೆಲವು ಹುಡುಗರು, "ಸರ್, ನಮ್ಗೆ ಆ ಸ್ಟಿಕ್ಕರ್ಸ್ ಕೊಡಿ" ಅಂದ್ರು. ಸರಿ, ಉಳಿದ ಸುಮಾರು ೫೦ ಲೇಬಲ್ ಗಳನ್ನು ಕೊಟ್ಟಾಗ ಜಗಳವಾಡಿಕೊಂಡು ಹಂಚಿಕೊಂಡರು. ಆ ಜಗಳ, ಹುಸಿ ಮುನಿಸು, ಸಂತೋಷ, ಉತ್ಸಾಹ, ಮುಗ್ಧತೆ, ನಗು - ಛೇ ನಮಗೆ ಬರಲು ಸಾಧ್ಯವೇ ಇಲ್ಲ. ಮಕ್ಕಳು ಮಕ್ಕಳೇ !!

ಸಾರ್ಥಕ ಭಾವದಿಂದ ಮನ ತುಂಬಿ ಬಂದಿತ್ತು. ಮುಂದಿನ ವರ್ಷ ಖಂಡಿತಾ ಎಲ್ಲ ಮಕ್ಕಳಿಗೂ ಪುಸ್ತಕಗಳನ್ನು ಕೊಡಬೇಕೆಂಬ ನಿರ್ಧಾರದೊಂದಿಗೆ ಎಲ್ಲರನ್ನೂ ಬೀಳ್ಕೊಟ್ಟೆವು.

ಈ ಸಾರ್ಥಕ ಯೋಜನೆಯನ್ನು ಸಾಕಾರಗೊಳಿಸಿದ ಬಳಗದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

-ಅಂಜನ್

ಬುಧವಾರ, ಮೇ 5, 2010

ನೋಟ್ ಬುಕ್ ಯೋಜನೆ - ೨೦೧೦





ಗುರುವಾರ, ಏಪ್ರಿಲ್ 29, 2010

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಸಹಾಯ ಹಸ್ತ

ನಮಸ್ಕಾರ,
ಗುಡಿಬಂಡೆ ಶಾಲೆಯ ಕಡೆಯಿಂದ ಬಂದ ಅಭಿನಂದನಾ ಪತ್ರ, ಅಲ್ಲಿನ ಭೇಟಿಗಳಬಗ್ಗೆ ವರದಿ, ಇವೆಲ್ಲವನ್ನೂ ನೀವು ಓದಿಯೇ ಇದ್ದೀರಿ.
ನಾನು ಈಗ ಹೇಳಲು ಹೊರಟಿರುವುದು ಈ ಶಾಲೆಯಲ್ಲಿ ಓದುತ್ತಿರುವ ಹೆಣ್ಣು ಮಕ್ಕಳ ಬಗ್ಗೆ.

ನಮ್ಮ ಅಣ್ಣತಮ್ಮಂದಿರ ಸರಿಸಮಾನವಾಗಿ ಆಟ ಪಾಠಗಳಲ್ಲಿ ಪಾಲ್ಗೊಳ್ಳುತ್ತಾ ಬೆಳೆದು, ಗಂಡು-ಹೆಣ್ಣು ಎಂದು ಭೇದವೆಣಿಸದೆ ನಮ್ಮ ಮಕ್ಕಳನ್ನು ಬೆಳೆಸುತ್ತಿರುವ ನಾವು, ಸಮಾನತೆ ಎನ್ನುವ ಪದವನ್ನು ಕೇಳಿದಾಗ ಅಷ್ಟೇನೂ ಗಹನವಾಗಿ ಆಲೋಚಿಸಲು ಹೋಗುವುದಿಲ್ಲ.
ಆದರೆ ಇಂದೂ ಸಹ ಆರ್ಥಿಕ ಬಿಕ್ಕಟ್ಟು ಹೆಚ್ಚಾದಾಗ ಹೇಗೂ ಮದುವೆಯಾಗಿ ಬೇರೆಯ ಮನೆಗೆ ಹೋಗಬೇಕಾದ ಮಗಳಿಗಿಂತ ಕುಲದೀಪಕನಾದ ಮಗನನ್ನು ಓದಿಸುವುದೇ ಲೇಸೆಂದು ಯೋಚಿಸುವಂಥಹ ಪೋಷಕರು ನಮ್ಮ ಸುತ್ತಮುತ್ತಲ ಹಳ್ಳಿಗಳಲ್ಲಿಯೇ ಇದ್ದಾರೆ. ಇಂಥಹ ಮನೆಗಳಲ್ಲಿ, ಅತಿ ಶೋಚನೀಯವಾದ ಆರ್ಥಿಕ ಪರಿಸ್ಥಿತಿಯಲ್ಲಿದ್ದುಕೊಂಡೇ ಅನೇಕ ಮಕ್ಕಳು ಓದಿನ ಬಗೆಗೆ ಒಲವನ್ನು ತೋರಿಸುತ್ತಾ, ಉತ್ತಮ ನಾಳೆಗಳ ನಿರೀಕ್ಷೆಯಲ್ಲಿ ಶಾಲೆಗೆ ಹೋಗುತ್ತಾರೆ.

ನಮ್ಮ ಗುಡಿಬಂಡೆ ಶಾಲೆಗೆ ಕಲಿಯಲು ಬರುವ ಅನೇಕ ಮಕ್ಕಳು ಇಂಥಹವರೆ. ಈ ಮಕ್ಕಳ ಏಳಿಗೆಗಾಗಿಯೇ ಪಣತೊಟ್ಟು ನಿಂತಿರುವ, "ಗುರು" ಎಂಬ ಪದಕ್ಕೆ ನಿಜವಾದ ಬೆಲೆದೊರಕಿಸುವಂಥಹ ಕೆಲಸಗಳನ್ನು ಮಾಡುತ್ತಿರುವ ಶ್ರೀಮಾನ್ ವೆಂಕಟೇಶ್ ರಂಥಹ ಶಿಕ್ಷಕರನ್ನು ಇಲ್ಲಿ ಸ್ಮರಿಸಲೇ ಬೇಕು. ಇವರ ಉತ್ತೇಜನದಿಂದ ಈ ಮಕ್ಕಳು ಸರ್ಕಾರದ ವತಿಯಿಂದ ದೊರೆತಿರುವ ಸೈಕಲ್ ಗಳನ್ನು ಏರಿ ದಿನವೂ ಸರಿಯಾದ ಸಮಯಕ್ಕೆ ಶಾಲೆಗೆ ಬರುತ್ತಿದ್ದಾರೆ. ಒಳ್ಳೆಯ ಅಂಕಗಳನ್ನು ಪಡೆಯಲು ಸತತವಾಗಿ ಪ್ರಯತ್ನಿಸುತ್ತಿದ್ದಾರೆ.
ಇಂಥಹ ಪ್ರಯತ್ನದಲ್ಲಿ ಸಫಲರಾದ ಹಲವು ವಿದ್ಯಾರ್ಥಿನಿಯರಿಗೆ ನಮ್ಮ ಬಳಗದ ಹಲವು ಸದಸ್ಯರು ಕೈಗಡಿಯಾರಗಳನ್ನು ಅಭಿನಂದನಾ ಪೂರ್ವಕವಾಗಿ ಕೊಟ್ಟಿರುವ ವಿಷಯ ನಿಮಗೆ ಗೊತ್ತಿದೆ.

ಈ ಬಾರಿಯ ಶೈಕ್ಷಣಿಕ ವರ್ಷದಿಂದ ಬಳಗವು, ಈ ಶಾಲೆಯ 10 ಜನ ಅರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಯೋಜನೆ ಹಾಕಿಕೊಂಡಿದೆ. ಆರ್ಥಿಕವಾಗಿ ಸಹಾಯಸಿಗದೆ ಇದ್ದರೆ ಓದನ್ನೇ ನಿಲ್ಲಿಸಬೇಕಾದ ಪರಿಸ್ಥಿತಿಯಲ್ಲಿರುವ ಅನೇಕ ಮಕ್ಕಳು, ಸಹಾಯ ಸಿಗಬಹುದೆಂಬ ಭರವಸೆ ದೊರೆತರೆ ನಿರಾಳವಾಗಿ ಓದಿ ತಮ್ಮ ಪ್ರತಿಭೆಯನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳಲು ನೆರವಾಗಬಹುದು.
ಈ ಮಕ್ಕಳಿಗೆ ಬರುವ ಶೈಕ್ಷಣಿಕ ವರ್ಷಕ್ಕೆ ಇರುವ ಅವಶ್ಯಕತೆಗಳು.

ಇದು ಸರ್ಕಾರೀ ಶಾಲೆಯಾದ್ದರಿಂದ ಇವರಿಗೆ ಪಠ್ಯ ಪುಸ್ತಕಗಳು ಹಾಗೂ ದಿನದ ಯುನಿಫಾರ್ಮ್ ಗಳು ಸರ್ಕಾರದ ವತಿಯಿಂದ ದೊರೆಯುತ್ತದೆ. ಇವನ್ನು ಹೊರತುಪಡಿಸಿ ಸರ್ಕಾರದಿಂದ ಸಿಗದಂಥಹ ಸಹಾಯದ ಪಟ್ಟಿ ಹೀಗಿದೆ:
ಒಂದು ಮಗುವಿಗೆ;
1. ಬಿಳಿ ಯುನಿಫಾರ್ಮ್ (ಗುರುವಾರ ಮತ್ತು ಶನಿವಾರ)
2. ಬಿಳಿ ಶೂ (ಎಲ್ಲಾ ದಿನಗಳಿಗೂ)
3. ಬ್ಯಾಗ್ ಗಳು
4. ಮತ್ತಿತರ ಪೂರಕ ವಸ್ತುಗಳು
ಗಮನಿಸಿ : ಬಳಗದ "ನೋಟ್ ಬುಕ್ ಯೋಜನೆ" ಯಿಂದ ಇವರಿಗೆಲ್ಲರಿಗೂ ನೋಟ್ ಬುಕ್ ಗಳನ್ನೂ ಮತ್ತು ಜಾಮಿಟ್ರಿ ಪೆಟ್ಟಿಗೆಗಳನ್ನು ಕೊಡಲಾಗುತ್ತಿದೆ.

ಮೇಲಿನ ಇಷ್ಟೂ ವಸ್ತುಗಳನ್ನು ಒಂದು ಮಗುವಿಗೆ ಕೊಡಿಸಲು ಆಗುವ ಸರಾಸರಿ ವೆಚ್ಚ - 1000/-
ಇಲ್ಲವೇ ನಿಮ್ಮ ಇಷ್ಟಾನುಸಾರವಾಗಿ ಕೂಡ ಹಣವನ್ನು ಕೊಡಬಹುದು. ನೀವು 100/- ಕೊಟ್ಟರೂ ಅದು ಅಗಾಧವಾದ ಸಹಾಯವಾಗಿದೆ.
ಆಸಕ್ತರು ಬಳಗದ ಖಜಾಂಚಿ ಹರ್ಷನಿಗೆ ಹಣವನ್ನು ವರ್ಗಾಯಿಸಬಹುದು. ಇಲ್ಲವೇ ನನಗೆ ಕೊಡಲು ಆಸಕ್ತಿ ಇದೆ ಅಂತ ಒಂದು ಮಿಂಚೆ ಕಳಿಸಿದರೂ ಆಯಿತು, ನಿಮ್ಮ ಹತ್ತಿರವೇ ಬಂದು ಹಣವನ್ನು ಪಡೆಯುತ್ತೇವೆ.

ಹಣ ವರ್ಗಾಯಿಸಿದ ಮೇಲೆ, ಹರ್ಷನಿಗೆ (harshas@alcatel-lucent.com) ಮಿಂಚೆ ಕಳಿಸಲು ಮರೆಯದಿರಿ
ಈ ಮೊದಲೇ ಹೇಳಿದಂತೆ ಈ ಮಕ್ಕಳಲ್ಲಿ ಹಲವರು ಕಡುಬಡತನದಲ್ಲಿ ಇರುವವರು. ಇವರಬಳಿ ದಿನನಿತ್ಯ ತೊಡಲೂ ಸಹ ಸರಿಯಾದ ಬಟ್ಟೆಗಳಿಲ್ಲ.
ನಮ್ಮ ಮನೆಗಳಲ್ಲಿ 8-9-10 ನೆ ತರಗತಿಯ ಹೆಣ್ಣು ಮಕ್ಕಳಿದ್ದಲ್ಲಿ ಅವರು ಉಪಯೋಗಿಸಿರುವಂಥಹ ಬಟ್ಟೆಗಳು ಇದ್ದರೆ, (ಹರಿದು ತೀರ ಬಣ್ಣ ಹೋದಂಥಹ ಬಟ್ಟೆಗಳು ಬೇಡ) ದಯವಿಟ್ಟು ಅಂಥಹ ಬಟ್ಟೆಗಳನ್ನು (ಒಗೆದು, ಇಸ್ತ್ರಿಮಾಡಿ) ನಮಗೆ ತಲುಪಿಸಿ. ಶಾಲೆಗೆ ನಮ್ಮ ಮುಂದಿನ ಭೇಟಿಯಲ್ಲಿ ಅವುಗಳನ್ನು ಒಟ್ಟುಮಾಡಿಕೊಂಡು ಹೋಗಿ ಈ ಮಕ್ಕಳಿಗೆ ತಲುಪಿಸುತ್ತೇವೆ.

ಈ ಬಾರಿಯು ನಿಮ್ಮಿಂದ ಒಳ್ಳೆಯ ಸಹಾಯದ ನಿರೀಕ್ಷೆಯಲ್ಲಿರುವ,
ಶ್ರೀಗಂಧ ಕನ್ನಡಬಳಗದ ಪರವಾಗಿ
- ವೀಣಾ


Hi Everybody,

All of you might have read that we recently received a letter of appreciation from the Education Department for our small contribution to Gudibande’s Government Girls High School.

The intent of this mail is to update you about the upcoming activities that we have planned for some of the girl students from this school.

In our busy lives in the city we hardly give a thought to gender parity that exists across our country. There are many talented poor girls who cannot make it to good education due to problems prevailing at their houses. Given an opportunity these girls can match the best of brains even in the cities like ours.

From this year onwards, we have decided to support 10 girl students from this school who undoubtedly deserve to continue their education in spite of their financial difficulties.

Since this is a Government school, basic uniform and text books are supplied from the Government. Some of things additionally required for the academic year which are not supported by the Government for each kid are White school uniform, White shoes, School Bags, Other miscellaneous items.

Please note that books will be provided to these students as part of our “Notebook Yojane”

The cost per student is approximately Rs.1000/-

Request all of you to give a thought for this noble cause and donate generously to Shrigandha Kannada Balaga and support our initiative.

Interested people could directly transfer the amount to our treasurer Harsha or could reply to me and I will come and collect it personally.

Once you have transferred the amount, please forward the details to harshas@alcatel-lucent.com.

We are confident that there will be a positive response from each of you in this noble cause.

Thank you again for your continued patronage

Best Regards,
Shrigandha Kannada Balaga

ಸೋಮವಾರ, ಮಾರ್ಚ್ 22, 2010

ಗುಡಿಬಂಡೆ ಶಾಲೆ - ಪ್ರತಿಭಾವಂತ ಮಕ್ಕಳಿಗೆ ಬಹುಮಾನ

GudibandeShaaleBheti-06Mar10

ಶುಕ್ರವಾರ, ಮಾರ್ಚ್ 12, 2010

ಗುಡಿಬಂಡೆಯ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಂದ ಪ್ರಶಂಸಾ ಪತ್ರ

ಶನಿವಾರ, ಮಾರ್ಚ್ 6, 2010

ಗುಡಿಬಂಡೆ ಶಾಲೆ - ನೀರು ಶುದ್ಧೀಕರಣ ಯಂತ್ರದ ಕೊಡುಗೆ

GudibandeShaaleBheti-05Dec09