(ಲೇಖನ: ವೀಣಾ ಪ್ರಭಾಕರ್)
ಜೂನ್ ೧೨ ರಂದು ಬೆಳಿಗ್ಗೆ ಅಂದುಕೊಂಡಂತೆಯೇ ನಮ್ಮ ಬಳಗದಿಂದ ಸುಮಾರು ೨೦ ಮಂದಿ ಗುಡಿಬಂಡೆ ಹೆಣ್ಣುಮಕ್ಕಳ ಶಾಲೆಗೆ ಹೋಗಿದ್ದೆವು. ಅಲ್ಲಿನ ಆ ಮಕ್ಕಳ ಹಾಗೂ ಅಧ್ಯಾಪಕ ವರ್ಗದವರ ಸಂಭ್ರಮ, ಉತ್ಸಾಹಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪ್ರತಿಯೊಂದು ಸಿದ್ದತೆಯಲ್ಲಿಯೂ ಶಿಸ್ತು, ಅಚ್ಚುಕಟ್ಟುತನ, ಶ್ರದ್ಧೆ, ಪ್ರಾಮಾಣಿಕತೆ ಎದ್ದು ಕಾಣುತ್ತಿತ್ತು.
ದೂರದಿಂದ ಬಂದಿರುತ್ತೇವೆಂದು ನಮಗಾಗಿಯೇ ತಯಾರಿಸಲ್ಪಟ್ಟ ವಿಧವಿಧವಾದ, ರುಚಿಯಾದ ತಿಂಡಿಗಳನ್ನು ಅಚ್ಚುಕಟ್ಟಾಗಿ ಬಡಿಸುತ್ತಾ ಮೆಲುದನಿ, ಮುಗುಳ್ನಗೆಯಿಂದ ಮತ್ತೆ ಮತ್ತೆ ವಿಚಾರಿಸಿಕೊಳ್ಳುತ್ತ ಆ ಮಕ್ಕಳು ನಮ್ಮ ಬಂಧುವರ್ಗದವರೇ ಏನೋ ಅನಿಸುವಷ್ಟು ಹೃದಯಕ್ಕೆ ಹತ್ತಿರವಾಗಿಬಿಟ್ಟರು. ಮತ್ತೆ ಕೆಲವು ಮಕ್ಕಳು ಸುಮಾರು ಆರು ಕಾರುಗಳಲ್ಲಿ ತುಂಬಿಕೊಂಡು ಹೋಗಿದ್ದ ಪುಸ್ತಕ ಮತ್ತಿತರೇ ವಸ್ತುಗಳನ್ನು ೧೦ ನಿಮಿಷಗಳ ಒಳಗಾಗಿ ಯಾವುದೇ ಅಬ್ಬರ, ಗೊಂದಲಗಳಿಲ್ಲದೆ ಮೊದಲನೇ ಮಹಡಿಗೆ ಸಾಗಿಸಿದ್ದರು.
ಮೊದಲನೇ ಮಹಡಿಯಲ್ಲಿದ್ದ (ಇತ್ತೀಚೆಗೆ ನಿರ್ಮಿತವಾಗಿರುವ) ಸಭಾಂಗಣದಲ್ಲಿ ಶಾಲೆಯ ಅಷ್ಟೂ ಮಕ್ಕಳೂ ಸ್ವಲ್ಪವೂ ಗಲಾಟೆ ಇಲ್ಲದೆ, ಸಾಲಾಗಿ, ನೂಕಾಡದೆ ಬಂದು ಸೇರಿದರು. ಸ್ವಲ್ಪ ಹೆಚ್ಚೇ ಅನಿಸುವಷ್ಟು ಭಾಷಣಗಳ ಸರಮಾಲೆಗಯನ್ನು ಹೊಂದಿದ್ದ ಸುಮಾರು ಎರಡೂವರೆ ಘಂಟೆಗಳ ಕಾಲ ನಡೆದ ಕಾರ್ಯಕ್ರಮವನ್ನು ಬಹಳ ಸಂಯಮ ಮತ್ತು ಶಿಸ್ತಿನಿಂದ ವೀಕ್ಷಿಸಿದರು.
ಹೂಗುಚ್ಛಗಳಿಗಾಗಿಯೇ ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡುವ ಈ ದಿನಗಳಲ್ಲಿ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಒಂದೊಂದು ಗುಲಾಬಿ ಹೂವನ್ನು ಕೊಟ್ಟು ಆತ್ಮೀಯವಾಗಿ ಸ್ವಾಗತಿಸಿದ್ದು ಎಲ್ಲರಿಗೂ ಮಾದರಿಯಾಗಿತ್ತು.
ಆಯಾ ಕಾರ್ಯಕ್ರಮಕ್ಕೆ ಯಾರ್ಯಾರು ನಿಯೋಜಿಸಲ್ಪಟ್ಟಿದ್ದರೋ ಆ ಮಕ್ಕಳು ಸ್ವಲ್ಪವೂ ತಡಮಾಡದೆ ಬಂದು ಅವರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಹೋಗುತ್ತಿದ್ದರು. ಲೀಲಾಜಾಲವಾಗಿ, ಸುಮಧುರವಾಗಿ, ಒಂದೇ ಕಂಠದಲ್ಲಿ ನಾಡಗೀತೆಯನ್ನು ಹಾಡಿದ ಮಕ್ಕಳಿಂದ ಹಿಡಿದು, ಒಂದೇ ರೀತಿಯಾಗಿ ಚಪ್ಪಾಳೆ ತಟ್ಟುವುದರವರೆಗೂ ಆ ಮಕ್ಕಳು ತಾವೆಲ್ಲರೂ ಒಂದೇ, ಸಾಧನೆಯ ಕಡೆಗೆ ಎಲ್ಲರೂ ಒಟ್ಟಾಗಿಯೇ ಹೆಜ್ಜೆಗಳನ್ನಿಡುತ್ತಿದ್ದೇವೆ ಎಂದು ಪರೋಕ್ಷವಾಗಿ ಹೇಳುವಂತಿತ್ತು.
ಆ ದಿನ ಆ ಮಕ್ಕಳಿಗೆ ಹಂಚಲ್ಪಟ್ಟ ಸಾಮಾನುಗಳು:
೧) ೧೩ ಮಕ್ಕಳಿಗೆ - ಬ್ಯಾಗ್, ಜಾಮಿಟ್ರಿ ಪೆಟ್ಟಿಗೆ, ಲೇಖನಿ, ಪೆನ್ಸಿಲ್, ರಬ್ಬರ್, ೧ ವರ್ಷಕ್ಕಾಗುವಷ್ಟು ಬರೆಯುವ ಪುಸ್ತಕಗಳು, ಬಿಳಿ ಸಮವಸ್ತ್ರ, ಶೂ ಮತ್ತು ಕಾಲು ಚೀಲ (ಸಾಕ್ಸ್).
೨) ೧೨ ಮಕ್ಕಳಿಗೆ - ಜಾಮಿಟ್ರಿ ಪೆಟ್ಟಿಗೆ, ಲೇಖನಿ, ಪೆನ್ಸಿಲ್, ರಬ್ಬರ್, ೧ ವರ್ಷಕ್ಕಾಗುವಷ್ಟು ಬರೆಯುವ ಪುಸ್ತಕಗಳು
೩) ಶಾಲೆಯ ಎಲ್ಲಾ ಮಕ್ಕಳಿಗೂ ಕನ್ನಡ-ಕನ್ನಡ, ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟುಗಳು, ಒಂದು ನೋಟ್ ಪುಸ್ತಕ, ಲೇಖನಿ, ಪೆನ್ಸಿಲ್ ಹಾಗು ರಬ್ಬರ್.
೪) ಎಂಟು, ಒಂಭತ್ತು ಹಾಗು ಹತ್ತನೆಯ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ಮಕ್ಕಳಿಗೆ ಕೈಗಡಿಯಾರ ಮತ್ತು ಅಭಿನಂದನಾ ಪತ್ರ.
೫) ೧೦ ನೇ ತರಗತಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಈಗ ಕಾಲೇಜು ಸೇರಿಸುವ ಇಬ್ಬರು ವಿದ್ಯಾರ್ಥಿನಿಯರಿಗೆ - ನೋಟ್ ಪುಸ್ತಕಗಳು, ಪಠ್ಯ ಪುಸ್ತಕಗಳು ಮತ್ತು ಹೊಸ ಬಟ್ಟೆಗಳು
೬) ಇದರ ಜೊತೆಗೆ ತಾವೆಲ್ಲರೂ ಕೊಟ್ಟ ಉಪಯೋಗಿಸಿದ ಬಟ್ಟೆಗಳನ್ನು ಅಧ್ಯಾಪಕರ ಸುಪರ್ದಿಗೆ ಕೊಟ್ಟು, ನಂತರ ಅವರಲ್ಲೇ ವಿತರಣೆ ಮಾಡಿಕೊಳ್ಳಲೂ ಕೇಳಿಕೊಂಡೆವು
ಅವರವರಿಗೆ ದೊರೆತ ವಸ್ತುಗಳನ್ನು ತೆಗೆದುಕೊಳ್ಳುತ್ತಾ ಹೊರಟ ಆ ಮಕ್ಕಳ ಕಣ್ಣುಗಳಲ್ಲಿನ ಮಿಂಚು ಮತ್ತು ಆ ಆನಂದದ ಮುಂದೆ ನೂರಾರು ಕೋಟಿ ರೂಪಾಯಿಗಳೂ ಕೂಡ ಗೌಣ ಅನ್ನಿಸುತ್ತಿತ್ತು. ಎಲ್ಲರ ಪರವಾಗಿ ಒಬ್ಬ ವಿದ್ಯಾರ್ಥಿನಿ ಎದ್ದುನಿಂತು, ತಮಗೆ ಸಿಕ್ಕಂಥಹ ಸಾಮಗ್ರಿಗಳನ್ನು ಪೂರ್ಣವಾಗಿ ಉಪಯೋಗಿಸಿಕೊಂಡು ಚೆನ್ನಾಗಿ ಓದಿ, ಮುಂದೊಂದು ದಿನ ಇದೇ ರೀತಿ ಬೇರೆಯ ಮಕ್ಕಳಿಗೆ ಸಹಾಯಕರಾಗಿ ನಿಲ್ಲುತ್ತೇವೆಂದು ಹೇಳಿದಾಗ ಆ ಧನಿಯಲ್ಲಿದ್ದ ಭರವಸೆ ಮತ್ತು ನೈಜತೆಗೆ ಕಣ್ಣು ತುಂಬಿಬಂತು.
ಟೀಂ ವರ್ಕ್ ಮತ್ತು ಟೀಂ ಬಿಲ್ಡಿಂಗ್ ಗಳಲ್ಲಿ ಯಾವ ಕಾರ್ಪೋರೇಟ್ ಗುರುಗಳಿಗೂ ಸವಾಲು ಹಾಕುವಹಾಗಿರುವ ಈ ಮಕ್ಕಳನ್ನು ನೋಡಿ ಮನಸ್ಸು ನಿಬ್ಬೆರಗಾಯಿತು. ಒಟ್ಟಿನಲ್ಲಿ ಈ ಮೂಲಕ ನಾವೆಲ್ಲರೂ ಕೂಡಿಸಿ ಕೊಟ್ಟಂತಹ ಪುಸ್ತಕಗಳು ಮತ್ತಿತರ ವಸ್ತುಗಳು ಸಾರ್ಥಕವಾಗಿದೆ ಎಂದು ತಿಳಿದು ಸಂತೋಷವಾಯಿತು. ನಿಸ್ವಾರ್ಥ ಮನಸ್ಸಿನಿಂದ ಈ ಮಕ್ಕಳಿಗೆ ಎಲ್ಲಾ ವಸ್ತುಗಳೂ ದೊರಕುವಂತೆ ಮಾಡಿರುವ ವೆಂಕಟೇಶ್ ಮೂರ್ತಿ ಮತ್ತಿತರ ಶಿಕ್ಷಕರನ್ನು ಇಲ್ಲಿ ನೆನೆಯಲೇ ಬೇಕು. ಇವರ ನೇತೃತ್ವದಲ್ಲಿ ಈ ವಸ್ತುಗಳು ಮಕ್ಕಳಿಂದ ಪೂರ್ಣವಾಗಿ ಉಪಯೋಗಿಸಲ್ಪಡುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
![](https://blogger.googleusercontent.com/img/b/R29vZ2xl/AVvXsEgzz8_qOQINSbocyCCSN9KgfysFpLiJ0QZJohRXXS9m4zuoUzItsWFifYSqh5swVYniuMFLoEDoHNa6aHH78HGR-fyqOVLujdUYIwKh85blsrDrZJpXyVo7sI8F_9OB1FcO5ff5i_uvH-I/s320/DSC06980.JPG)
![](https://blogger.googleusercontent.com/img/b/R29vZ2xl/AVvXsEikNIO3Bl1X-ahFTEYXtXp5-Evj31QKxwXI8ohakxQ2LAejCUSBwT31dAwyzrHli5jC5z7Je_GdT8Aj9PZtEiM7GOs5FfGZPchfyj5nqeJAZeWfsS3rqPo8EfFF0TdW6WtoHnArdq5TjFM/s320/GudibandeKaryakrama_12June2010_PrajavaniVaradi.jpg)
![](https://blogger.googleusercontent.com/img/b/R29vZ2xl/AVvXsEjLlQ6Wfz8Y6p4uw19Hc6OOf6x0ZMF_xStZWj1Qa5ihOdzCdf3HEVB3WebxcKZhQNZ-JMiHGnjl9DDdziJ23MyW8dy47EjtfsgaJKZ1hnc8AhdSD1yF2xhqrbLBLigh0NDb2YAiZazSHSg/s320/GudibandeKaryakrama_12June2010_KannadaprabhaVaradi.jpg)
ಮತ್ತೊಂದು ಲೇಖನ
(ಲೇಖನ: ರವಿ ಪೂಜಾರಿ)
ಗುಡಿಬಂಡೆ ಗುಡಿಯ ವಿಚಾರ
"ರೀ ಅಂಜನ್, ಸುಂದ್ರೇಶ್, ಆನಂದ್, ಪ್ರಶಾಂತ್, ಪ್ರಕಾಶ್... ಈ ಪುಸ್ತಕದ್ ಕ್ವಾಲಿಟಿ ಚೆನ್ನಾಗಿಲ್ಲ ರೀ, ಬೇರೆ ಯಾವ್ದಾದ್ರು ನೋಡೋಣ"... "ಬೇರೆ ಯಾವ್ದೋ ಯಾಕೆ, ವಿಧ್ಯಾ ಲೇಖಕ್ ಪುಸ್ತಕನೇ ಕೊಡೋಣವಂತೆ, ನಂಗೆ ಎಮ್.ಎಸ್.ಐ.ಎಲ್ ನಲ್ಲಿ ಇರೋ ಡೈರೆಕ್ಟ್ರೆ ಗೊತ್ತು, ನಮ್ಮ ಬಳಗಕ್ಕೆ ಅಂದ್ರೆ ತುಂಬ ಕಡಿಮೆ ಬೆಲೆಯಲ್ಲೆ ಕೊಡ್ತಾರೆ, ಪುಸ್ತಕ ಪ್ರಿಂಟ್ ಮಾಡೋ ಕಾರ್ಖಾನೆಗೆ ಕರೆದುಕೊಂಡು ಹೋಗ್ತೀನಿ ಬನ್ನಿ ಮರಾಯರೆ, ಚಿಂತೆ ಯಾಕೆ."
ಹೀಗೆ ಶುರುವಾಯ್ತು ನಮ್ಮ ಗುಡಿಬಂಡೆ ಶಾಲೆಯ ಮಕ್ಕಳಿಗೆ ಕಲಿಕೆ ಸಾಮಗ್ರಿ ನೀಡುವ ಪೂರ್ವ ತಯಾರಿ. ಕಾರ್ಯಕಾರಿ ಸಮಿತಿಯ ಒಬ್ಬೊಬ್ಬರು ಅತಿ ಉತ್ಸಾಹದಿಂದ ಈ ಕಾರ್ಯದ ಪೂರ್ವ ತಯಾರಿಯಲ್ಲಿ ತೊಡಗಿದ ಪರಿ ಹೇಗಿತ್ತೆಂದರೆ, ನಾವೆಲ್ಲ ಯಾವ್ದೋ ಮದುವೆ ಸಮಾರಂಭಕ್ಕೆ ತಯಾರಿ ನಡೆಸಿದ ಹಾಗಿತ್ತು, ಅಷ್ಟು ಅಚ್ಚುಕಟ್ಟು, ಶ್ರದ್ಧೆ ಮತ್ತು ಉತ್ಸಾಹ ಭರಿತ ಮನೋಭಾವ. ನಾವು ಅಂದುಕೊಂಡಂತೆ ಎಲ್ಲಾ ಕೆಲಸವು ಸರಾಗವಾಗಿ ಮುಗಿಯಿತು ಮತ್ತು ಗುಡಿಬಂಡೆಗೆ ತೆರಳುವ ದಿನ ಬಂದೇ ಬಿಡ್ತು.
ಅಂದು ಶನಿವಾರ, ನಾವೆಲ್ಲ ಅತಿ ಉತ್ಸಾಹದಿಂದ ಗುಡಿಬಂಡೆ ಕಡೆಗೆ ಪ್ರಯಾಣ ಬೆಳೆಸಿದೆವು. ದಾರಿ ಮದ್ಯದಲ್ಲಿ ಸಿಕ್ತು "ಕಾಮತ್" ಹೋಟೆಲ್. ಬೆಳಿಗ್ಗೆ ಬೇಗನೆ ಎದ್ದಿದ್ರಿಂದ ಹೊಟ್ಟೆ ಚುರು ಚುರು ಅಂತಿತ್ತು, ಅದು ಹೋಟೆಲ್ ನೋಡಿದ್ ಮ್ಯಾಲ್ ಅಂತು ಇನ್ನು ಹೆಚ್ಚಾಯ್ತು. ತಿಂಡಿ ತಿಂದು, ಕಾಫಿ ಹೀರ್ ಕೊಂಡು ಮತ್ತೆ ನಮ್ಮ ಪಯಣ ಮುಂದುವರಿಸಿದೆವು. ನಮ್ಮೆಲ್ಲರ ಕಾರ್ ಗಳು ಒಂದರ ಹಿಂದೆ ಒಂದು ಸಾಲಾಗಿ ಆ ಊರಿನಲ್ಲಿ ಶಾಲೆ ಕಡೆಗೆ ಹೋಗ್ತಾ ಇದ್ರೆ, ಜನರು "ಇದೇನ್ ಲಾ ಈಟೋಂದ್ ಕಾರ್ ಗಳು ಇಸ್ಕೂಲ್ ಕಡೆ ಹೋಯ್ತವೆ" ಅನ್ನೋ ತರ ನೋಡ್ತಾ ಇದ್ದಂಗ್ ಇತ್ತು.
ನಾವೆಲ್ಲರು ಶಾಲೆಯ ಆವರಣದ ಒಳಗೆ ಬರುತ್ತಿದ್ದಂತೆ ನಮ್ಮನ್ನ ಮೊದಲು ಸ್ವಾಗತಿಸಿದ್ದು ವರುಣರಾಯ, ಜಿನು ಜಿನುಗುವ ಮಳೆರಾಯ. ಮದುವೆ ಮಂಟಪಕ್ಕೆ ಗಂಡಿನ ಕಡೆಯವರನ್ನ ಬರಮಾಡಿಕೊಂಡಂತಿತ್ತು ಅವರು ನಮ್ಮನ್ನು ಬರಮಾಡಿಕೊಡುವಲ್ಲಿ ತೋರಿದ ಗೌರವ. ನಾವೆಲ್ಲರೂ ಅಲ್ಲಿಗೆ ಹೋಗಿ ಮಕ್ಕಳನ್ನ ನೋಡೋದೇ ನಮ್ಮ ಹೆಬ್ಬಯಕೆ ಒಂದೆಡೆಯಾದ್ರೆ, ನಮಗಾಗಿ ಅಷ್ಟು ದೂರದಿಂದ ನಮ್ಮನ್ನು ನೋಡಲು ಬಂದವರನ್ನ ಪ್ರೀತಿಯಿಂದ ನೋಡ್ಕೊಬೇಕು ಅನ್ನೋದು ಶಾಲೆಯವರ ಬಯಕೆ. ನಾವೆಲ್ಲ "ಕಾಮತ್" ಹೋಟೆಲ್ ನಲ್ಲಿ ಸ್ವಲ್ಪ ತಿಂಡಿ ತಿಂದಿದ್ವಿ ಆದ್ರೂ, ಅವರು ಪ್ರೀತಿಯಿಂದ ಎಲ್ರೂ ತಿಂಡಿ ತಿನ್ನಿ ಬನ್ನಿ ಅಂದಾಗ ಸ್ವಲ್ಪ ಜಾಸ್ತಿನೇ ಹಸಿವಾಯ್ತು. "ಪ್ರೀತಿಗೆ ದಾಹ ತೀರದ ಮೋಹ" ಅಂತ ಹಿರಿಯರು ಯಾರೋ ಹೇಳಿದ್ದು ನೆನಪಾಯ್ತು..
ಕಾರುಗಳಲ್ಲಿ ನಾವು ತೆಗೆದು ಕೊಂಡು ಹೋಗಿದ್ದ ಕಲಿಕಾ ಸಾಮಗ್ರಿಗಳನ್ನು ಶಾಲೆಯ ಮಕ್ಕಳೇ ಹತ್ತು ನಿಮಿಷದಲ್ಲಿ ಸಂಗ್ರಹಣ ಕೊಠಡಿಯೊಳಗೆ ಸಾಗಿಸುವುದಲ್ಲದೇ, ನಾವು ಪ್ರಿಂಟ್ ಮಾಡಿಸಿದ್ದ ಹೆಸರು ಬರೆವ ಸ್ಟಿಕ್ಕರ್ ನ್ನ ಬರೀ ಹತ್ತೇ ನಿಮಿಷದಲ್ಲಿ ಅಂಟಿಸಿದರು. ಆ ಮಕ್ಕಳು ಒಬ್ಬರನ್ನೊಬ್ಬರನ್ನು ನೋಡಿ ಕಣ್ಣು ಸನ್ನೆಯಲ್ಲೇ ಯಾವ್ಯಾವ ಕೆಲಸ ಯಾರ್ ಯಾರು ಮಾಡ್ಬೇಕು ಅಂತ ನಿಗದಿ ಪಡಿಸಿ, ಹತ್ತೇ ಹತ್ತು ನಿಮಿಷದಲ್ಲಿ ಕೆಲಸ ಮುಗಿಸಿ ಬಿಟ್ರು. ಇದನ್ನೇ ನಾವು ಆಫೀಸ್ನಲ್ಲಿ ಟೀಮ್ ವರ್ಕ್ ಅಂದ್ಕೊಂಡು ಹತ್ತು ಜನ ಒಂದು ವಾರ ಎಳಿತೀವಿ. ಹಿ.. ಹಿ.. ಹಿ..ಹಿ..
ಶಾಲೆಯ ಒಂದು ಸಭಾಂಗಣದಲ್ಲಿ ಈ ಸಮಾರಂಭಕ್ಕೆ ಸೇರಿದೆವು. ಸುಮಾರು ನಾಲ್ಕು ನೂರಕ್ಕು ಹೆಚ್ಚು ಮಕ್ಕಳು ಸೇರಿದ್ದ ಈ ಸಭಾಂಗಣದಲ್ಲಿ ಮಕ್ಕಳು ಸ್ವಲ್ಪವೂ ಗಲಾಟೆ ಮಾಡದೆ, ಶಿಸ್ತಿನಿಂದ ಕುಳಿತು ಅತಿ ಉತ್ಸಾಹದಿಂದ ನಡೆಯುವ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದರು. ಸಭೆಗೆಂದು ಅಂದು ಗುಡಿಬಂಡೆಯ ಗಣ್ಯಾತಿ ಗಣ್ಯರು, ಶಿಕ್ಷಣಾದಿಕಾರಿಗಳು, ಹಿರಿಯ ಪಂಡಿತರು, ಶಾಲೆಯ ಮುಖ್ಯೋಪಾದ್ಯಾಯರು, ಶಾಲೆಯಲ್ಲಿ ಈ ಮುಂಚೆ ಸೇವೆ ಸಲ್ಲಿಸಿದವರು ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು. ಅಸಲಿಗೆ ನಾವು ಈ ಮಟ್ಟದಲ್ಲಿ ಸಭೆಯನ್ನು ನಿರೀಕ್ಷಿಸಿಯೇ ಇರಲಿಲ್ಲ, ಎಲ್ಲವೂ ನಮಗೆ ಕನಸಿನಂತೆ ಕಾಣುತ್ತಿತ್ತು. ಉಪಸ್ಥಿರಿದ್ದ ಒಬ್ಬೊಬ್ಬರು ಮಹನೀಯರು, ಪಂಡಿತರು, ಜೀವನದಲ್ಲಿ ಸಾಕಷ್ಟು ಸಾದನೆಗೈದವರು, ಅವರನ್ನೆಲ್ಲಾ ಒಂದೇ ಸೂರಿನಡಿ ನೋಡುವುದು ನಮಗೆ ಒದಗಿ ಬಂದ ಭಾಗ್ಯವೆಂದುಕೊಂಡೆವು.
ಮಧುರಾತಿ ಮಧುರವಾದ ನಾಡಗೀತೆಯೊಂದಿಗೆ ಶಾಲೆಯ ಕಾರ್ಯಕ್ರಮಗಳು ಶುರುವಾದವು. ಮಕ್ಕಳು ಮಧುರ ಕಂಠದಿಂದ ಹಾಡ್ತಿದ್ರೆ, ನಮಗೆಲ್ಲ ನಮ್ಮ ಶಾಲೆಯ ದಿನಗಳು ನೆನಪಾದವು, ನಾವೆಲ್ಲ ನಮ್ಮ ನಮ್ಮ ಮುಖ ನೋಡ್ಕೊಂಡು ನಿಮ್ಗು ಹಿಂಗೆ ಅನ್ಸ್ತಾ ಅಂತ ಕಣ್ಣಲ್ಲೇ ಕೇಳಿ ಕೊಂಡೆವು. ಕಾರ್ಯಕ್ರಮದ ವಿವರಣೆ ನೀಡುವಲ್ಲಿ ಶಾಲೆಯ ಮುಖ್ಯ ರುವಾರಿ ವೆಂಕಟೇಶ್ ಮೂರ್ತಿಯವರು ಮುಂದಾದರು. ದೀಪ ಬೆಳಗುವ ಸಮಯಕ್ಕೆ ಸರಿಯಾಗಿ ಬಂದ ಗುಡಿಬಂಡೆಯ ಬಿ.ಇ.ಒ ಅವರನ್ನು ಸ್ವಾಗತಿಸಿ, ಮಹನೀಯರು, ಬಳಗದ ಸದಸ್ಯರು, ಹಿರಿಯರು ಸೇರಿ ಜ್ಯೋತಿ ಬೆಳಗಿದರು.
ವೆಂಕಟೇಶ್ ಮೂರ್ತಿಯವರ ಮೊದಲ ಮಾತು ಶ್ರೀಗಂಧ ಕನ್ನಡ ಬಳಗದ ಕಾರ್ಯವನ್ನು ತುಂಬು ಹೃದಯದಿಂದ ಹೊಗಳುವುದು. ಅವರ ಈ ಹೊಗಳಿಕೆಯ ಮಾತುಗಳಲ್ಲಿ ನೈಜತೆ ಇತ್ತು, ಮಾನವೀಯತೆಯ ಲೇಪನವಿತ್ತು, ಸಾಮಾಜಿಕ ಸಂಘಟನೆಯ ಛಾಪಿತ್ತು, ಪ್ರೀತಿಯ ಧನ್ಯಾವಾದಗಳಿದ್ದವು. ಅವರ ಸ್ಪಷ್ಟ ಉಚ್ಚಾರಣೆ, ಭಾಷೆಯಲ್ಲಿನ ಹಿಡಿತ ಮತ್ತು ಅವರ ಮುಗ್ದ ಮನಸ್ಸಿನ ಮಾತುಗಳು ನಮ್ಮ ಕಂಗಳನ್ನು ಕೊಂಚ ತೇವ ಮಾಡಿದವು. ಚಿಕ್ಕದಾಗಿ, ಚೊಕ್ಕವಾಗಿ ಮಾತನಾಡಿ ಮುಂದೆ ನಡೆಯುವ ಕಾರ್ಯಕ್ರಮಗಳ ಬಗ್ಗೆ ಸಣ್ಣ ವಿವರಣೆ ನೀಡಿದರು. ಮೊದಲಿಗೆ ಉತ್ತಮ ಅಂಕ ಗಳಿಸಿದ 8, 9, 10ನೇ ತರಗತಿಯಿಂದ ಮೂರು ಮಕ್ಕಳಿಗೆ ಕೈ ಗಡಿಯಾರ ನೀಡುವುದೆಂದು ಹೇಳುತ್ತಿದ್ದಂತೆ ಮಕ್ಕಳ ಕಣ್ಣುಗಳಲ್ಲಿ ಆಸೆ ಮತ್ತು ಆಸಕ್ತಿ ಎರಡೂ ಮೂಡಿದವು. ಕೈಗಡಿಯಾರ ಪಡೆದ ಮೂವರು ಮಕ್ಕಳು ಕುಣಿಯುತ್ತ ತಮ್ಮ ತಮ್ಮ ಸಹ ಪಾಟಿಗಳಿಗೆ ತೋರಿಸುತ್ತಿದ್ದಂತೆ ನಮ್ಮ ಬಳಗದವರು ಈ ಮಾತನ್ನು ಹೇಳಿದರು. "ನಾವು ಇನ್ನೂ ನಾಲ್ಕು ನೂರು ಕೈಗಡಿಯಾರವನ್ನ ನಿಮಗೆ ಕೊಡಬೇಕೆಂದಿದ್ದೇವೆ, ಆದರೆ ನೀವೆಲ್ಲರೂ ಉತ್ತಮ ಅಂಕ ಗಳಿಸುವುದೊಂದೆ ಷರತ್ತು" ಎಂದರು. ಎಲ್ಲಾ ಮಕ್ಕಳು ಖುಶಿಯಿಂದ ಚಪ್ಪಾಳೆ ಹೊಡೆಯುವ ಮೂಲಕ, ನಾವು ಸಾದಿಸಿಯೇ ಸಿದ್ದ ಎಂಬ ಆಶ್ವಾಸನೆ ನೀಡಿದರು.
ನಂತರ ಶಾಲೆಯವರು ಗುರುತಿಸಿದ್ದ ಹದಿಮೂರು ಮಕ್ಕಳಿಗೆ Uniforms, shoes, bags, notebooks, geometry boxes ನೀಡಿದೆವು. ಅದಾದ ನಂತರ ಹನ್ನೆರೆಡು ಮಕ್ಕಳಿಗೆ ಪೂರ್ಣ ಪ್ರಮಾಣದ ಕಲಿಕೆ ಸಾಮಗ್ರಿಗಳನ್ನು ನೀಡಿದೆವು. ಅದಾದ ನಂತರ ಎಲ್ಲಾ ಮಕ್ಕಳಿಗೂ ಆಂಗ್ಲ ಮತ್ತು ಕನ್ನಡದ ಶಭ್ದಕೋಶ, ಪೆನ್ನು, ಪೆನ್ಸಿಲ್ಲು, ರಬ್ಬರ್ರು, ಕಥೆ ಪುಸ್ತಕ ಎಲ್ಲವನ್ನ ಒಂದೊಂದಾಗಿ ನೀಡಿದೆವು. ಆ ಮಕ್ಕಳ ಮುಖದಲ್ಲಿ ಮೂಡಿದ ನಗು, ಉತ್ಸಾಹವನ್ನು ಕಂಡು ಅವರೊಂದಿಗೆ ನಾವೂ ಸೇರಿ ನಲಿದೆವು, ಆ ಕ್ಷಣಗಳು ನಮ್ಮನ್ನು ಈಗಲೂ ರೋಮಾಂಚನಗೊಳಿಸುತ್ತವೆ. ಕಾರ್ಯಕ್ರಮ ಶುರುವಾಗುವ ಮುನ್ನ, ಶುರುವಾದ ನಂತರ ಮತ್ತು ಕಾರ್ಯಕ್ರಮದ್ದುದ್ದಕ್ಕೂ ಆ ಮಕ್ಕಳಲ್ಲಿದ್ದ ಶಿಸ್ತು, ಶ್ರದ್ಧೆ ಮಕ್ಕಳಲ್ಲಿದ್ದ ನಮ್ಮ ಅಭಿಮಾನ ಇಮ್ಮಡಿಗೊಳಿಸಿತು. ಶಾಲೆಯ ಮುಖ್ಯಸ್ಥರು ಗುರುತಿಸಿದ ಕೆಲವು ಮಕ್ಕಳಿಗೆ ಬಹುಮಾನ ನೀಡುವಾಗ ಮತ್ತು ಮಹನೀಯರು ಅವರನ್ನು ಕುರಿತು ಮಾತನಾಡಿದ ನಂತರ, ಎಲ್ಲರೂ ಸಮಾನರು ಎಂದು ತಿಳಿಸಲು ಎಲ್ಲರಿಗೂ ಒಂದೇ ರೀತಿಯ ಚಪ್ಪಾಳೆ ಹೊಡೆದು ಪ್ರೋತ್ಸಾಹಿಸುತ್ತಿದ್ದರು. ಟಪ್ ಟಪ್ ಟಪ್...., ಟಪ್ ಟಪ್ ಟಪ್...., ಟಪ್... ಟಪ್... ಟಪ್... ಶಾಲೆಯ ಸಮವಸ್ತ್ರದಂತೆ ಕೇಳಿ ಬಂದ ಆ ಚಪ್ಪಾಳೆಯ ಶಬ್ಧ ತರಂಗಗಳು ನಮಗೆ ಸಂಗೀತದ ಅಲೆಯಂತೆ ಬಂದು ಕರ್ಣಾನಂದ ನೀಡುವಂತಿದ್ದವು.
ಪುಸ್ತಕ ಮತ್ತು ಮತ್ತಿತರ ಕಲಿಕಾ ಸಾಮಗ್ರಿಗಳ ವಿನಿಯೋಗವಾದ ನಂತರ ಶಾಲೆಯ ಮುಖ್ಯಸ್ಥರು ಮಕ್ಕಳನ್ನು ಕುರಿತು ನಾಲ್ಕು ಮಾತನಾಡಬೇಕಾಗಿ ನಮ್ಮ ಬಳಗದವರಲ್ಲಿ ವಿನಂತಿಸಿದರು. ಮೊದ್ಲೇ ನಮ್ಗು ಭಾಷಣಕ್ಕು ಒಗ್ಗದ ಮಾತು, ಅದರಲ್ಲಿ ನಾವು ಭಾಷಣಕ್ಕಾಗಿ ಪೂರ್ವ ತಯಾರಿಯನ್ನೂ ಮಾಡ್ಕೊಂಡಿರಲಿಲ್ಲ. ಆದ್ರೆ ಮನಸ್ಸು ತುಂಬಿ ಬಂದಾಗ ಯಾವ ಪೂರ್ವ ತಯಾರಿನೂ ಬೇಕಿಲ್ಲ ಅನ್ನೋದು ನಮ್ಮ ಬಳಗದವರ ಹಿತಿನುಡಿಯಿಂದ ತಿಳಿಯಿತು. ನೀತಿ ಕಥೆಯಿಂದ ತಮ್ಮ ಮಾತನ್ನು ಶುರು ಮಾಡಿ, ಮಕ್ಕಳ ಗಮನ ಸೆಳೆದು "ಸತ್ಯಮೇವಜಯತೇ" ಎಂಬ ಸತ್ಯವನ್ನು ಮಕ್ಕಳಿಗೆ ತಿಳಿಸುವಲ್ಲಿ ಶ್ರೀಯುತ ಅಶ್ವತ್ ಅವರು ಯಶಸ್ವಿಯಾದರು. ನಾಲ್ಕೇ ನಾಲ್ಕು ಮಾತನಾಡಿ ಉಳಿದದ್ದನ್ನು "ಗುಟ್ಟೊಂದ ಹೇಳುವೆನು ಪುಟಾಣಿ ಮಕ್ಕಳೇ" ಎಂಬ ಹಾಡಿನ ಮೂಲಕ ಮಕ್ಕಳಿಗೆ ಹಿತನುಡಿ ಹೇಳಿದವರು ನಮ್ಮ ಮಧುರ ಕಂಠದ ಪ್ರಕಾಶ್ ಅವರು. ಕೊಟ್ಟೋನು ಕೋಡಂಗಿ, ಈಸ್ಕೋಂಡೋನು ಈರ್ ಭದ್ರ ಆದಂಗ್ ಆಗ್ ಬಾರದು, ನಿಮಗೆ ನೀಡಿರುವ ಎಲ್ಲಾ ಕಲಿಕೆ ಸಾಮಗ್ರಿಗಳನ್ನ ನೀವು ಸದ್ಭಳಕೆ ಮಾಡಿಕೊಂಡಲ್ಲಿ ನಮ್ಮ ಶ್ರಮ ಸಾರ್ಥಕ ಅಂತ ಎರಡೇ ಸಾಲಿನಲ್ಲಿ ತಮ್ಮ ಮಕ್ಕಳಿಗೆ ಮುನ್ನೆಚ್ಚರಿಕೆ ನೀಡಿ ಹಿತನುಡಿ ಹೇಳಿದವರು ನಮ್ಮ ಮೃದು ಹೃದಯದ ಆನಂದ್ ಅವರು. ಹೆಣ್ಣಿಗೆ ಮತ್ತೊಂದು ಹೆಣ್ಣೇ ಕಿವಿ ಮಾತನ್ನ ಸವಿಯಾಗಿ ಹೇಳಿದ್ರೆ ಹೆಚ್ಚು ಕಾಲ ಉಳಿಯುತ್ತೆ ಎಂದು ಹೆಳುತ್ತ ನಮ್ಮ ವೀಣಾ ಪ್ರಭಾಕರ್ ಅವರಲ್ಲಿ ವಿನಂತಿಸುತ್ತಿದ್ದಂತೆ ದಿಗ್ಭ್ರಾಂತರಾದ ಅವರು ತಡವರಿಸುತಲೇ ತಮ್ಮ ಮಾತನ್ನು ಶುರುಮಾಡಿದರು. ಹಳ್ಳಿಯಲ್ಲಾಗ್ಲಿ ದಿಲ್ಲಿಯಲ್ಲಾಗ್ಲಿ, ಸಮಾಜದಲ್ಲಿ ಮತ್ತು ನಮ್ಮ ಭಾರತದ ಜೀವನ ಶೈಲಿಯಲ್ಲಿ ಹೆಣ್ಣು ಮಕ್ಕಳ ಪಾತ್ರ ಅತಿ ಮುಖ್ಯವಾಗಿರುತ್ತದೆ. ಹೆಣ್ಣೊಂದು ಕಲಿತರೆ ಮನೆಯೊಂದು ಕಲಿತಂತೆ, ಹಾಗಾಗಿ ನನ್ನ ಪುಟ್ಟ ತಂಗಿಯರೇ ನೀವು ಕಲಿಯಬೇಕು, ಕಲಿತು ನಿಮ್ಮ ಮನೆಯನ್ನ ಬೆಳಗುವ ಬೆಳಕಾಗ ಬೇಕು ಎಂದು ಮಕ್ಕಳಲ್ಲಿ ಸ್ಪೂರ್ಥಿ ತುಂಬಿ ಆತ್ಮ ಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾದರು. ಭಾಷಣ ಕೇಳ ಕೇಳುತ್ತಲೇ ನಮ್ಮ ಆಶು ಕವಿತೆ ಎಕ್ಸ್ ಪರ್ಟ್ ವಿನಯ್ ಪಟ ಪಟಾ ಅಂತ ಕವಿತೆ ಹೇಳೆ ಬಿಟ್ರು, ಚಿಕ್ಕದಾಗಿ ಚೊಕ್ಕವಾಗಿ ಹೇಳಿ ಮಕ್ಕಳಿಗೆ ಕವಿತೆಗಳಲ್ಲಿ ಆಸಕ್ತಿ ಮೂಡುವಂತೆ ಮಾಡಿದರು. ಉಳಿದ ಬಳಗದ ಸದಸ್ಯರಾದ ಅಂಜನ್, ಪ್ರಶಾಂತ್, ಸುಂದ್ರೇಶ್, ಸೌಮ್ಯ, ಪ್ರತಿಭ, ರಾಜ್ ಶೇಕರ್, ಭಾಷಣ ಇಷ್ಟೇ ಸಾಕು, ಮುಂದಿನ ಕಾರ್ಯಕ್ರಮ ನೋಡೊನ ಅಂತ ಹೇಳಿದರು. ಇಷ್ಟೆಲ್ಲಾ ಹಿತನುಡಿ ಕೇಳಿದ ಮಕ್ಕಳು ನಗು ನಗುತ್ತ ಮನೆಗೆ ತೆರಳಲಿ ಎಂಬ ಉದ್ದೇಶದಿಂದ ರವಿ ಪೂಜಾರಿ ಕೆಲವೊಂದು ಜೋಕ್ಸ್ ಹೇಳಿ, ಅವರ ಫೇವರೇಟ್ ಆದ ಕುಡುಕನ ಶೈಲಿಯಲ್ಲಿ ಕೆಲವೊಂದು ಪದಗೊಳ್ನ ಹೇಳಿ ಮಕ್ಕಳನ್ನ ಮತ್ತು ನೆರೆದ ಸಭೆಯನ್ನ ನಗಿಸುವಲ್ಲಿ ಯಶಸ್ವಿಯಾದರು.
ಸಭಾಂಗಣದಲ್ಲಿ ಸಭೆಯನ್ನು ಅಲಂಕರಿಸಿದ ಒಬ್ಬೊಬ್ಬ ಮಹನೀಯರು ನಮ್ಮ ಬಳಗದ ಬಗ್ಗೆ ಮತ್ತು ಈ ಕಾರ್ಯಕ್ರಮದ ಬಗ್ಗೆ ಹೊಗಳುತ್ತಿದ್ದಂತೆ ನಾವು ಏನನ್ನೋ ಸಾದಿಸಿದ ಹೆಮ್ಮೆ ಎಂಬಂತೆ ಮನಸ್ಸು ಬೀಗುತ್ತಿತ್ತು, ಸಾರ್ಥಕತೆಯ ಬದುಕಿನ ಹಾದಿಯಲ್ಲಿ ಪಯಣಿಸಲು ಶುರು ಮಾಡಿದೀವಿ ಅಂತ ಅನ್ಸ್ತಿತ್ತು. "ಮನುಷ್ಯರಾಗಿ ಹುಟ್ಟಿದ ನಾವೆಲ್ಲ ಅದೆಷ್ಟೇ ಕಷ್ಟ ಆದ್ರು ನಮ್ಮನ್ನ ನಾವು ಸಮಾಜ ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಬೇಕು, ಉತ್ತಮ ಕಾರ್ಯಗಳನ್ನ ರೂಡಿಸಿ ಸಾಮಾಜಿಕ ಪಿಡುಗುಗಳನ್ನ ನಾಶ ಮಾಡ್ಬೇಕು; ಅದನ್ನೇ ಈ ಶ್ರೀಗಂಧ ಕನ್ನಡ ಬಳಗದವರು ತಮ್ಮ ಕೆಲಸದ ಮೂಲಕ ಸಮಾಜಕ್ಕೆ ತಿಳಿಸಿದ್ದಾರೆ" ಎಂದು ಕನ್ನಡ ಮತ್ತು ಸಂಸ್ಕೃತ ಪಂಡಿತರು ಹೇಳಿದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ. ಕೂಡಲೇ ನಮಗೆ ನೆನಪಾದದ್ದು ಈ ಕಾರ್ಯದ ಹಿಂದಿರುವ ನಮ್ಮ ಬಳಗದ ಎಲ್ಲಾ ಸದಸ್ಯರ ಶ್ರಮ ಮತ್ತು ಸಹಾಯ ಮನೋಭಾವ. ಅಯ್ಯೋ...ಎಂದು ಬರುವವರಿಗೆ ಮಿಡಿಯುವ ನಮ್ಮ ಶ್ರೀಗಂಧ ಕನ್ನಡ ಬಳಗದ ಮನಗಳ ನಡುವೆ ವಾಸಿಸುವುದೇ ನನ್ನ ಭಾಗ್ಯ.
0 ಅಭಿಪ್ರಾಯಗಳು:
ಕಾಮೆಂಟ್ ಪೋಸ್ಟ್ ಮಾಡಿ